ಮಂಗಳೂರು:ಕೇವಲ ಉದ್ಘಾಟಿಸಿ ನಾವೇ ಕಾಮಗಾರಿ ನಡೆಸಿದ್ದು ಎಂದು ಹೇಳಿಕೊಳ್ಳುವವರು ಬಿಜೆಪಿಯವರು. ಖಜಾನೆ ಖಾಲಿಯಾದವರಿಂದ ಎಷ್ಟು ಕೆಲಸಗಳಾಗಬಹುದು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಖಜಾನೆ ತುಂಬಿತ್ತು. ಆದ್ದರಿಂದ ನಾವು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇವೆ ಎಂದು ಶಾಸಕ ರಮಾನಾಥ ರೈ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಖಜಾನೆಯೇ ಖಾಲಿಯಾದ ಬಿಜೆಪಿಗರು ಏನು ಮಾಡಲು ಸಾಧ್ಯ. ಇಂದು ನೆರೆ ಪರಿಹಾರವೇ ಕೊಡಲಾರದಂತಹ ಸ್ಥಿತಿಯಲ್ಲಿದ್ದಾರೆ ಎಂದು ಟೀಕಿಸಿದರು.
ಸಂಸದ ಪ್ರಹ್ಲಾದ ಜೋಶಿ ಅವರು ಹಿಂದೆ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಾಗ ನಾವು ತಿನ್ನೋದಿಲ್ಲ ತಿನ್ನಲು ಬಿಡೋದಿಲ್ಲ ಎಂದಿದ್ದರು. ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಹಲವಾರು ಮಂದಿ ಕೇಂದ್ರ ಸಚಿವರಾಗಿದ್ದರು. ಇವರಲ್ಲಿ ಯಾರು ತಿಂದವರು, ಯಾರು ತಿನ್ನದವರು ಎಂದು ಈ ಜಿಲ್ಲೆಯ ಪ್ರಜ್ಞಾವಂತ ಜನರಿಗೆ ತಿಳಿದಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅದರಲ್ಲಿರುವ ಎಲ್ಲರೂ ಯೋಗ್ಯರು. ಉಳಿದವರೆಲ್ಲರೂ ಸರಿಯಿಲ್ಲದವರು ಎಂಬುವಂತೆ ಬಿಂಬಿಸುತ್ತಾರೆ. ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಶುರುವಾಗಿದೆ. ನಮ್ಮ ಮಹಾನಗರ ಪಾಲಿಕೆ ಪ್ರತಿಷ್ಠಿತ ಪಾಲಿಕೆ. ಒಂದು ಬಾರಿ ಹೊರತುಪಡಿಸಿ ಮಿಕ್ಕೆಲ್ಲ ಸಂದರ್ಭಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿತ್ತು ಎಂದು ಹೇಳಿದರು.