ಕರ್ನಾಟಕ

karnataka

ETV Bharat / city

ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸೆ ನಿರಾಕರಿಸಿದರೆ ನಿರ್ದಾಕ್ಷಿಣ್ಯ ಕ್ರಮ - Minister Kota Srinivasa Poojary

ಖಾಸಗಿ ಆಸ್ಪತ್ರೆಗಳಲ್ಲಿ‌ ಕೋವಿಡ್ ಸೋಂಕಿತರೆಂಬ ಕಾರಣಕ್ಕೆ ಗರ್ಭಿಣಿಯರಿಗೆ ಚಿಕಿತ್ಸೆ ನೀಡದೆ ಸತಾಯಿಸಿದಲ್ಲಿ ಮತ್ತು ಹೆರಿಗೆ ಮಾಡಿಸದಿದ್ದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.

Minister Kota Srinivasa Poojary  Statement
ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸೆ ನಿರಾಕರಿಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

By

Published : Jul 20, 2020, 11:26 PM IST

ಮಂಗಳೂರು:ಖಾಸಗಿ ಆಸ್ಪತ್ರೆಗಳಲ್ಲಿ‌ ಕೋವಿಡ್ ಸೋಂಕಿತರೆಂಬ ಕಾರಣಕ್ಕೆ ಗರ್ಭಿಣಿಯರಿಗೆ ಚಿಕಿತ್ಸೆ ನೀಡದೆ ಸತಾಯಿಸಿದಲ್ಲಿ ಮತ್ತು ಹೆರಿಗೆ ಮಾಡಿಸದಿದ್ದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.

ವೆನ್ಲಾಕ್​ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ಗರ್ಭಿಣಿಯರಿಗೆ ವ್ಯವಸ್ಥಿತವಾಗಿ ಹೆರಿಗೆ ಮಾಡಿಸಲು ಆಯಾ ಆಸ್ಪತ್ರೆಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಇದರಲ್ಲಿ ವಿಳಂಬ ಸಲ್ಲದು ಎಂದರು. ಅಲ್ಲದೆ, ನೆಲ್ಯಾಡಿಯ ಗರ್ಭಿಣಿಯೊಬ್ಬರು ಚಿಕಿತ್ಸೆಗಾಗಿ ದಿನಪೂರ್ತಿ ಅಲೆದಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸಚಿವರು ಜಿಲ್ಲಾಧಿಕಾರಿಗೆ ಆದೇಶಿಸಿದರು. ಸಕಾಲಕ್ಕೆ ಮಹಿಳೆಗೆ ಚಿಕಿತ್ಸೆ ನೀಡಲು ವಿಳಂಬಿಸಿದ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಬಿದ್ದರೆ ಅಂಥವರನ್ನು ಸೇವೆಯಿಂದ ಅಮಾನತು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಲೇಡಿಗೋಷನ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್​ಗಳ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು. ಇದರಿಂದ ಗರ್ಭಿಣಿಯರಿಗೆ ಲೇಡಿಗೋಷನ್‍ನಲ್ಲಿಯೇ ಚಿಕಿತ್ಸೆ ನೀಡಬಹುದಾಗಿದೆ.‌ ಅಲ್ಲದೆ, ವೆನ್ಲಾಕ್​ ಆಸ್ಪತ್ರೆಗೆ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ನೇಮಿಸಿ, ಯಾವುದೇ ರೋಗಿಗಳು ಬಂದರೂ ಅವರಿಗೆ ಸೂಕ್ತ ಚಿಕಿತ್ಸೆ ದೊರಕಿಸಲು ಕ್ರಮ ಕೈಗೊಳ್ಳಬೇಕು.‌ ವೆನ್ಲಾಕ್​ನಲ್ಲಿ ಐಸಿಯು ಕೊಠಡಿಗಳ ವಿಸ್ತರಣೆ ಹಾಗೂ ಹೆಚ್ಚುವರಿ ವೆಂಟಿಲೇಟರ್​ಳನ್ನು ಅಳವಡಿಸಲು ಕೂಡಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಅದೇ ರೀತಿ ಹೆಚ್ಚುವರಿ ಪಿಪಿಇ ಕಿಟ್, ಎನ್-95 ಮಾಸ್ಕ್​ಗಳ ಬೇಡಿಕೆಯಷ್ಟು ಪೂರೈಸಲಾಗುವುದು. ಇನ್ನಷ್ಟು ವೈದ್ಯರು, ಪ್ರಯೋಗಶಾಲಾ ತಂತ್ರಜ್ಞರು, ಡಿ ಗ್ರೂಪ್ ಸಿಬ್ಬಂದಿಯ ನೇಮಕ, ಆ್ಯಂಬುಲೆನ್ಸ್​ಗಳ ಖರೀದಿ ಸೇರಿದಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸರ್ಕಾರಕ್ಕೆ ಅನುಮೋದನೆ ನೀಡಲಾಗುತ್ತದೆ ಎಂದರು.

ಫಾದರ್ ಮುಲ್ಲರ್ ಆಸ್ಪತ್ರೆಗೆ ಸಚಿವರ ಭೇಟಿ: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ರೋಗಿಗಳ ನಿರ್ವಹಣೆ ಕುರಿತು ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿಗಳು ಕೋವಿಡ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುವ ಬಗ್ಗೆ ಸ್ಪಷ್ಟವಾದ ನಿರ್ದೇಶನ ನೀಡಿದ್ದಾರೆ. ಎಲ್ಲಾ ಆಸ್ಪತ್ರೆಗಳಲ್ಲಿ ಶೇಕಡಾ 50ರಷ್ಟು ಹಾಸಿಗೆಗಳನ್ನು ಸೋಂಕಿತರಿಗೆ ಮೀಸಲಿಡಲು ಆದೇಶಿಸಲಾಗಿದೆ. ಸೋಂಕಿತ ರೋಗಿಗಳು ಆಸ್ಪತ್ರೆ ಪ್ರವೇಶಕ್ಕಾಗಿ ಅಲೆದಾಡುವುದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದರು.

ABOUT THE AUTHOR

...view details