ಮಂಗಳೂರು :ಇಂಗ್ಲೆಂಡ್ನ ಲ್ಯಾಂಕಸ್ಟರ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಷಯದಲ್ಲಿ ಪಿಹೆಚ್ಡಿ ಮಾಡುತ್ತಿರುವ ಮಂಗಳೂರು ಮೂಲದ ಪ್ರೀತಿ ಲೋಲಾಕ್ಷ ನಾಗವೇಣಿ ಅವರು ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ.
ಪ್ರೀತಿ ಅವರು, ಈ ಹಿಂದೆ 'ಅಂಗವಿಕಲರ ಹಕ್ಕುಗಳು' ಹಾಗೂ 'ಮೂಲನಿವಾಸಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಹಕ್ಕುಗಳ' ಬಗ್ಗೆ ವಿಶ್ವಸಂಸ್ಥೆಯ ಸಮಿತಿಗಳ ಮುಂದೆ ತಮ್ಮ ವಿಚಾರ ಮಂಡಿಸಿ ಗಮನ ಸೆಳೆದಿದ್ದರು.
ಈ ಬಾರಿ, 'ಆಫ್ರಿಕನ್ನರು ಮತ್ತು ಆಫ್ರಿಕಾ ಮೂಲದ ಜನರ ವಿರುದ್ಧ ಕಾನೂನು ಅನುಷ್ಠಾನಾಧಿಕಾರಿಗಳು ಬಳಸುತ್ತಿರುವ ಅತಿಯಾದ ಬಲ ಪ್ರಯೋಗ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧವಾಗಿ ಈ ಜನರ ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯದ ಸಂರಕ್ಷಣೆ ಮತ್ತು ಉತ್ತೇಜನ' ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಸಿದ್ಧಪಡಿಸುತ್ತಿರುವ ವರದಿಗೆ ಪ್ರೀತಿ ಅವರು ಬೌದ್ಧಿಕ ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರಿನ ಯುವತಿಯಿಂದ ವಿಶ್ವಸಂಸ್ಥೆಯಲ್ಲಿ 'ಮಹಿಳೆಯರ ಹಕ್ಕು ಪರ ಭಾಷಣ'
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಕಾನೂನು ಅನುಷ್ಠಾನ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲೇ ಅಸ್ತಿತ್ವದಲ್ಲಿರುವ ಜನಾಂಗೀಯ ತಾರತಮ್ಯ ನೀತಿಯ ಬಗ್ಗೆ ವಿಶ್ವಸಂಸ್ಥೆಯ ಗಮನ ಸೆಳೆದಿರುವ ಪ್ರೀತಿ ಅವರು, ಈ ತಾರತಮ್ಯ ನೀತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ತಡೆಗಟ್ಟಲು ಅಮೆರಿಕಾದ ಪೊಲೀಸ್ ವ್ಯವಸ್ಥೆಯನ್ನು ಯಾವ ರೀತಿ ಸುಧಾರಣೆ ಮಾಡಬಹುದು ಎಂಬ ಬಗ್ಗೆ ಮಹತ್ವಪೂರ್ಣವಾದ ಒಂಬತ್ತು ಶಿಫಾರಸುಗಳನ್ನು ಮಾನವ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಹೈಕಮಿಷನರ್ಗೆ ಸಲ್ಲಿಸಿದ್ದಾರೆ.
ಈ ಶಿಫಾರಸುಗಳ ಮಹತ್ವವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್, ಅದನ್ನು ತನ್ನ ಅಧಿಕೃತ ವೆಬ್ ಸೈಟ್ನಲ್ಲಿ ಪ್ರಕಟಿಸಿದೆ. ಪ್ರೀತಿ ಅವರು ಈ ಮಹತ್ವಪೂರ್ಣ ವಿಚಾರವನ್ನು ತಮ್ಮ ಸಹಪಾಠಿ ಸಂಶೋಧನಾ ವಿದ್ಯಾರ್ಥಿ ಅಮಿತ್ ಆನಂದ್ ಎಂಬುವರ ಜೊತೆಯಲ್ಲಿ ಸಿದ್ಧಪಡಿಸಿದ್ದಾರೆ.
ಪ್ರೀತಿ ಸಿದ್ಧಪಡಿಸಿದ ಈ ವಿಚಾರವನ್ನು ಓದಲುhttps://www.ohchr.org/Documents/Issues/Racism/RES_43_1/NGOsAndOthers/amit-anand-preethi-lolaksha-nagaveni.pdfಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಪ್ರೀತಿ ಅವರು ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ ಚಿಂತಕ ಲೋಲಾಕ್ಷ ಮತ್ತು ನಾಗವೇಣಿ ಪಿ ಅವರ ಪುತ್ರಿಯಾಗಿದ್ದಾರೆ. ಇವರ ಹಲವಾರು ಸಂಶೋಧನಾ ಲೇಖನಗಳು ಅಂತಾರಾಷ್ಟ್ರೀಯ ಅಕಾಡೆಮಿಕ್ ಜರ್ನಲ್ಗಳಲ್ಲಿ ಪ್ರಕಟಗೊಂಡಿವೆ.