ಮಂಗಳೂರು:ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ದೊರಕುವುದಿಲ್ಲ, ಸರಿಯಾದ ವ್ಯವಸ್ಥೆಗಳಿಲ್ಲದೆ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂಬಂತಹ ದೂರುಗಳು ದಿನನಿತ್ಯ ಎಲ್ಲಾ ಕಡೆಗಳಿಂದ ಕೇಳಿ ಬರುತ್ತಿರುವ ಈ ಸಮಯದಲ್ಲಿ, ತಿಂಗಳ ಹಿಂದೆ ಕೋವಿಡ್ ಸೋಂಕಿಗೆ ತುತ್ತಾಗಿ ಇದೀಗ ಗುಣಮುಖರಾಗಿರುವ ವಯೋವೃದ್ಧರೋರ್ವರು ವೆನ್ಲಾಕ್ ಕೋವಿಡ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ತಂಡದ ಸೇವೆ, ಮುತುವರ್ಜಿಯನ್ನು ಶ್ಲಾಘಿಸಿ ಪತ್ರ ಬರೆದಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿರುವ ನಗರದ ಬೋಳಾರ್ ನಿವಾಸಿ ಬಿ.ಎಂ. ಬಶೀರ್ ಅಹ್ಮದ್ (79), ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡದ ಸೇವೆಯನ್ನು ಶ್ಲಾಘಿಸಿ ಪತ್ರ ಬರೆದಿರುವವರು.
ಬಿ.ಎಂ. ಬಶೀರ್ ಅಹ್ಮದ್ ಹೇಳುವಂತೆ, ಒಂದು ತಿಂಗಳ ಹಿಂದೆ ನನಗೆ ವಿಪರೀತ ಜ್ವರ ಕಾಣಿಸಿಕೊಂಡಿತು. ನಾನದನ್ನು ಮಾಮೂಲಿ ಜ್ವರ ಎಂದು ಪರಿಗಣಿಸಿ, ನಗರದ ಖಾಸಗಿ ಆಸ್ಪತ್ರೆಗೆ (ಯುನಿಟಿ ಆಸ್ಪತ್ರೆಗೆ) ತಪಾಸಣೆ ಹಾಗೂ ಚಿಕಿತ್ಸೆಗಾಗಿ ತೆರಳಿದೆ. ಅಲ್ಲಿ ಸರ್ಕಾರದ ನಿಯಮದಂತೆ ಮೊದಲಿಗೆ ಕೋವಿಡ್ ತಪಾಸಣೆಗಾಗಿ ನನ್ನ ಗಂಟಲು ದ್ರವದ ಮಾದರಿಯನ್ನು ತಪಾಸಣೆ ಮಾಡಲಾಯಿತು. ಅದರಲ್ಲಿ ನನಗೆ ಕೋವಿಡ್ ಸೋಂಕು ತಗುಲಿರೋದು ದೃಢಗೊಂಡಿತು. ತಕ್ಷಣ ನನ್ನನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಯಿತು.
ಮೊದಲೇ ನಾನು ಮಧುಮೇಹ ರೋಗಿ. ಅಲ್ಲದೆ ವೆನ್ಲಾಕ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲವೆಂಬ ಎರಡು ಕಾರಣಕ್ಕೆ ನಾನು ಬಹಳಷ್ಟು ಗಾಬರಿಗೊಳಗಾಗಿದ್ದೆ. ಆದರೆ ಆಸ್ಪತ್ರೆಗೆ ದಾಖಲಾದ ಬಳಿಕ ಈ ಎರಡೂ ಭಯ ನನ್ನಿಂದ ದೂರವಾಗಿ ನಿರಾಳನಾಗಿದ್ದೆ ಎಂದು ಬಶೀರ್ ಅಹ್ಮದ್ ಹೇಳುತ್ತಾರೆ.
ಸೇವೆ ಮಾಡಿದ ವೈದ್ಯರಿಗೆ ಸಲಾಂ ನಿಜವಾಗಿಯೂ ವೆನ್ಲಾಕ್ ಕೋವಿಡ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯ ತಂಡ ಹೊರಗಡೆ ಜನರಲ್ಲಿರುವ ಅಭಿಪ್ರಾಯದಂತೆ ಇಲ್ಲ. ಸೋಂಕಿತರ ಬಗ್ಗೆ ಮುತುವರ್ಜಿ ವಹಿಸಿ ಸೇವೆ ಮಾಡುತ್ತಾರೆ. ಸೋಂಕಿತರಿಗೆ ಉತ್ತೇಜನ ನೀಡುವ ಸಲುವಾಗಿ ಧೈರ್ಯ ತುಂಬುತ್ತಾರೆ. ಮಾಮೂಲಿ ಜ್ವರದಂತೆ ಕೋವಿಡ್ ಸೋಂಕನ್ನು ಎದುರಿಸಬಹುದು. ಅಲ್ಲದೆ ಕೋವಿಡ್ ಸೋಂಕು ಸಾಯುವಂತಹ ರೋಗವೂ ಅಲ್ಲ. ಒಂದು ವಾರದಲ್ಲೇ ಗುಣ ಆಗುವಂತಹ ಸಾಧಾರಣ ಸೋಂಕು ಎಂದು ಧೈರ್ಯ ತುಂಬುತ್ತಾರೆ ಎನ್ನುವ ಬಶೀರ್ ಅಹ್ಮದ್, ವೆನ್ಲಾಕ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಪ್ಯಾರಸಿಟಮಲ್ ಮಾತ್ರೆ ವಿಟಮಿನ್ ಮಾತ್ರೆಗಳು ಹಾಗೂ ರೋಗನಿರೋಧಕ ಮಾತ್ರೆಗಳನ್ನು ನೀಡುತ್ತಾರೆ ಎಂದು ಹೇಳುತ್ತಾರೆ.
ಅಲ್ಲದೆ ತಾನು ಸೋಂಕಿತನಾಗಿರುವ ಸಂದರ್ಭ ಸರಿಯಾಗಿ ಬಿಸಿನೀರು ಕುಡಿಯುತ್ತಿದ್ದೆ, ನಡೆದಾಡುತ್ತಿದ್ದೆ. ಬೆಳಗ್ಗಿನ ಹೊತ್ತು ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡುತ್ತಿದ್ದೆ. ಬಿಸಿನೀರಿನ ಹಬೆಯನ್ನು ಆಸ್ವಾದಿಸುತ್ತಿದ್ದೆ. ಇದೇ ನನ್ನನ್ನು ಕೊರೊನಾ ಸೋಂಕಿನಿಂದ ಗುಣಮುಖನಾಗಿಸಿತ್ತು. ಯಾರೂ ಧೃತಿಗೆಡುವ ಅವಶ್ಯಕತೆಯಿಲ್ಲ. ಕೊರೊನಾ ಒಂದು ಸಾಮಾನ್ಯ ಸೋಂಕು. ಆದರೆ ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧಾರಣೆ, ಪ್ರತಿಬಾರಿಯೂ ಕೈಶುಚಿಗೊಳಿಸೋದು, ಮನೆಯಿಂದ ಹೊರಗಿರುವ ಸಂದರ್ಭದಲ್ಲಿ ಸ್ಯಾನಿಟೈಸರ್ ಬಳಸುವುದು, ಅಲ್ಲದೆ ಸರಿಯಾಗಿ ನೀರು ಕುಡಿಯುತ್ತಿದ್ದಲ್ಲಿ ಸೋಂಕು ನಮ್ಮ ಹತ್ತಿರಕ್ಕೂ ಸುಳಿಯೋದಿಲ್ಲ ಎಂದು ಬಶೀರ್ ಅಹ್ಮದ್ ಕಿವಿಮಾತು ಹೇಳುತ್ತಾರೆ.
ವೆನ್ಲಾಕ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಸೇವೆಯನ್ನು ಪರಿಗಣಿಸಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.