ಮಂಗಳೂರು: ಹಾಡಹಗಲೇ ಕಳ್ಳತನ ನಡೆದ ಹಿನ್ನೆಲೆ ಮನೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ಇದೀಗ ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆಯೊಂದು ಓಡಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಕಳ್ಳರ ಭೀತಿ ಹಿನ್ನೆಲೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆ ಸೆರೆ: ಹೆಚ್ಚಿದ ಆತಂಕ - Leopard
ಮನೆಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಈ ಹಿನ್ನೆಲೆ ಮಂಗಳೂರಿನ ನಾರ್ಲಪದವು ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಮಾರ್ಚ್ 26ರಂದು ನಗರದ ಹೊರವಲಯದಲ್ಲಿನ ಮಳಲಿ ನಾರ್ಲಪದವು ಎಂಬಲ್ಲಿನ ಸದಾಶಿವ ಸಾವಂತ್ ಎಂಬುವರ ಮನೆಯಲ್ಲಿ ಹಾಡಹಗಲೇ ಕಳ್ಳತನ ನಡೆದಿತ್ತು. ಆ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಮನೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ನಿನ್ನೆ ಅವರು ಸಿಸಿಟಿವಿ ಕ್ಯಾಮರಾ ವೀಕ್ಷಣೆ ಮಾಡಿದಾಗ ಚಿರತೆಯೊಂದು ಅಡ್ಡಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಈ ಪ್ರದೇಶದಲ್ಲಿ ಈ ಹಿಂದೆಯೇ ಚಿರತೆಗಳ ಓಡಾಟ ಕಂಡು ಬರುತ್ತಿದ್ದು, ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು. ಅರಣ್ಯ ಇಲಾಖೆ ಬೋನು ಇಟ್ಟು ಚಿರತೆ ಹಿಡಿಯುವ ಪ್ರಯತ್ನ ಮಾಡಿದರೂ ಕೂಡ ಕಾರ್ಯ ಫಲಪ್ರದವಾಗಿರಲಿಲ್ಲ. ಇದೀಗ ಮತ್ತೆ ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆ ಸೆರೆಯಾದ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.