ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯ (ಸಿ.ಆರ್.ಝಡ್) ನಲ್ಲಿ ಮರಳು ಪರವಾನಗಿ ನೀಡಲಾಗಿದ್ದರೂ ಕೆಲವು ಸ್ಥಳಗಳಲ್ಲಿ ಮರಳುಗಾರಿಕೆ ನಡೆಸಲು ತೊಡಕಾಗಿರುವ ಸ್ಥಳೀಯ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಿ.ಆರ್.ಝಡ್ ವಲಯದಲ್ಲಿ ಮರಳು ತೆಗೆಯಲು 105 ತಾತ್ಕಾಲಿಕ ಪರವಾನಗಿ ನೀಡಲಾಗಿದೆ. ಇದರಲ್ಲಿ ಅಂದಾಜು 11 ಲಕ್ಷ ಮೆಟ್ರಿಕ್ ಟನ್ ಮರಳು ಎತ್ತಬಹುದು. ಆದರೆ ಇದುವರೆಗೆ 4 ಲಕ್ಷ ಮೆಟ್ರಿಕ್ ಟನ್ ಮರಳು ಮಾತ್ರ ಎತ್ತಲಾಗಿದೆ. ಮರಳುಗಾರಿಕೆ ಬ್ಲಾಕ್‍ಗಳ ಪ್ರದೇಶದಲ್ಲಿ ಸ್ಥಳೀಯವಾದ ಕೆಲವು ಸಮಸ್ಯೆಗಳಿಂದ ಮರಳುಗಾರಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮರಳುಗಾರಿಕೆ ನಡೆಸಬೇಕು. ಜನಸಾಮಾನ್ಯರಿಗೆ ಸಮರ್ಪಕವಾಗಿ ಕಡಿಮೆ ದರದಲ್ಲಿ ಮರಳು ದೊರಕಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದರು.