ಮಂಗಳೂರು (ದಕ್ಷಿಣ ಕನ್ನಡ) :ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಅಪರೂಪದ 'ಆರಟ' ಸೇವೆಯೊಂದಿಗೆ ತೆರೆ ಎಳೆಯಲಾಯಿತು. ಬೆಳ್ಳಂಬೆಳಗ್ಗೆ ಅತ್ತೂರು-ಕೊಡೆತ್ತೂರು ಜನರ ನಡುವೆ ನಡೆಯುವ 'ಅಗ್ನಿಕೇಳಿ'ಯನ್ನು ನೋಡಲು ಸಾವಿರಾರು ಭಕ್ತರು ದೇವಸ್ಥಾನದ ರಥಬೀದಿಯಲ್ಲಿ ಸೇರಿದ್ದರು.
ಆರಟವನ್ನು ತೂಡೆದಾರ ('ಅಗ್ನಿಕೇಳಿ' ಆಚರಣೆ) ಸೇವೆಯೆಂದೂ ಕರೆಯುತ್ತಾರೆ. ಯುದ್ಧದ ಸನ್ನಿವೇಶವನ್ನು ಇಲ್ಲಿ ಮರುಸೃಷ್ಟಿ ಮಾಡಲಾಗುತ್ತದೆ. ತೆಂಗಿನ ಗರಿಯ ಸೂಟೆಗೆ (ತೆಂಗಿನ ಗರಿಯ ಒಂದು ಹಿಡಿ) ಬೆಂಕಿ ಹಚ್ಚಿ ಒಬ್ಬರ ಮೇಲೊಬ್ಬರು ಎಸೆಯುತ್ತಾ ಬೆಂಕಿ ಯುದ್ಧ ನಡೆಸುತ್ತಾರೆ. ಈ ಸನ್ನಿವೇಶವು ಭಾರಿ ಯುದ್ಧದ ಸನ್ನಿವೇಶವನ್ನು ನೆನಪಿಸುತ್ತದೆ. ಐತಿಹ್ಯದ ಪ್ರಕಾರ ಲೋಕಕಂಟಕನಾದ ಅರುಣಾಸುರನ ಸಂಹರಿಸಿದ ಕಟೀಲು ಶ್ರೀ ದುರ್ಗೆಯನ್ನು ಬೆಂಕಿಯಿಂದಲೇ ಸ್ವಾಗತ ಕೋರಲಾಗಿತ್ತಂತೆ. ಇದನ್ನೇ ಈಗ ತೂಟೆದಾರ ಸೇವೆ ಎನ್ನಲಾಗುತ್ತದೆ.
ಈ ಅಗ್ನಿಕೇಳಿಯಲ್ಲಿ ಅತ್ತೂರು-ಕೊಡೆತ್ತೂರು ಎರಡು ಊರಿನ ಜನರು ಪಾಲ್ಗೊಳ್ಳುತ್ತಾರೆ. ತೂಟೆದಾರದಲ್ಲಿ ಭಾಗವಹಿಸುವವರಿಗೆ ಕುಂಕುಮ ಹಾಗೂ ಹೂವು ನೀಡಲಾಗುತ್ತದೆ. ಈ ಆಟದಲ್ಲಿ ಭಾಗವಹಿಸುವವರೆಲ್ಲರೂ ಗಂಡಸರಾದರೂ ಹೂ ಮುಡಿಯುತ್ತಾರೆ. ದೇಹಕ್ಕೆ ಕುಂಕುಮ ಲೇಪನ ಮಾಡಿಕೊಳ್ಳುತ್ತಾರೆ. ಅಗ್ನಿಕೇಳಿಯಲ್ಲಿ ಬೆಂಕಿಯ ಸೂಟೆಯನ್ನು ಮೈಮೇಲೆ ಎಸೆಯಲಾಗುತ್ತಾದರೂ ತೂಟೆದಾರದಲ್ಲಿ ಈವರೆಗೆ ಯಾವುದೇ ಅನಾಹುತಗಳು ನಡೆದ ಉದಾರಹಣೆಗಳಿಲ್ಲ.