ಮಂಗಳೂರು:ವಿವಾದಾತ್ಮಕ ಹೇಳಿಕೆ ನೀಡಿದ್ದ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರು ಇಂದು ವಿಡಿಯೋ ಮೂಲಕ ಕ್ಷಮೆಯಾಚನೆ ಮಾಡಿದ್ದಾರೆ.
ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಧರ್ಮೇಂದ್ರ, "ನಿನ್ನೆ ನಡೆದ ಮಾಧ್ಯಮಗೋಷ್ಟಿಯಲ್ಲಿ ಗಾಂಧೀಜಿಯವ ಹಿಂದುತ್ವ ವಿರೋಧ ನೀತಿಯ ಕುರಿತು ನಾನು ಮಾತಾಡಿದ್ದೇನೆಯೇ ಹೊರತು, ಯಾರಿಗೂ ಬೆದರಿಕೆ ಒಡ್ಡಿಲ್ಲ. ನನ್ನ ಹೇಳಿಕೆಯಲ್ಲಿ ಹತ್ಯೆ ಎಂಬ ಶಬ್ಧವು ಅಸಾಂವಿಧಾನಿಕವಾದಲ್ಲಿ ಆ ವಿಚಾರವಾಗಿ ನಾನು ಕ್ಷಮೆ ಕೇಳುತ್ತೇನೆ" ಎಂದಿದ್ದಾರೆ.
ವಿವಾದಿತ ಹೇಳಿಕೆಗೆ ಕ್ಷಮೆ ಕೋರಿದ ಹಿಂದೂ ಮಹಾಸಭಾ ಮುಖಂಡ ಧರ್ಮ ರಕ್ಷಣೆಯ ವಿಚಾರದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಯಾವಾಗಲೂ ನಿಲ್ಲುತ್ತದೆ ಎಂಬುದು ನನ್ನ ಮಾತಿನ ಅರ್ಥ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಗಾಂಧೀಜಿಯನ್ನೆ ಬಿಟ್ಟಿಲ್ಲ, ನಿಮ್ಮನ್ನು ಬಿಡ್ತೀವಾ ಹೇಳಿಕೆ... ಹಿಂದೂ ಮಹಾಸಭಾದ ಧರ್ಮೇಂದ್ರ ವಿರುದ್ಧ ದೂರು
ಶನಿವಾರ ಬೆಳಗ್ಗೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಧರ್ಮೇಂದ್ರ ಅವರು ಮೈಸೂರಿನಲ್ಲಿ ದೇವಸ್ಥಾನ ಕೆಡವಿದ ವಿಚಾರದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹಿಂದೂ ವಿರೋಧಿ ವಿಚಾರದಲ್ಲಿ ಗಾಂಧೀಜಿಯನ್ನೇ ಬಿಟ್ಟಿಲ್ಲ, ಇನ್ನು ನಿಮ್ಮ ಬಗ್ಗೆ ಆಲೋಚನೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದುಕೊಂಡಿದ್ದೀರಾ? ಎಂದು ವಾಗ್ದಾಳಿ ನಡೆಸಿದ್ದರು.
ಇವರ ಹೇಳಿಕೆಯನ್ನು ಖಂಡಿಸಿ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಲೋಹಿತ್ ಕುಮಾರ್ ಸುವರ್ಣ ಎಂಬವರು ಮುಖ್ಯಮಂತ್ರಿಗೆ ಕೊಲೆ ಬೆದರಿಕೆಯೊಡ್ಡಲಾಗಿದೆ ಎಂದು ಮಂಗಳೂರಿನ ಬರ್ಕೆ ಠಾಣೆಯಲ್ಲಿ ಧರ್ಮೆಂದ್ರ ಅವರ ವಿರುದ್ದ ದೂರು ದಾಖಲಿಸಿದ್ದಾರೆ. ಇದೀಗ ದೂರು ದಾಖಲಾಗುತ್ತಿದ್ದಂತೆ ಧರ್ಮೇಂದ್ರ ವಿಡಿಯೋ ಮಾಡಿ ಕ್ಷಮೆ ಕೋರಿದ್ದಾರೆ.