ಮಂಗಳೂರು: ಕೊರೊನಾ ಸೋಂಕಿನ ಪರಿಣಾಮ ದ.ಕ ಜಿಲ್ಲೆಯನ್ನ ಸಂಪೂರ್ಣ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯದ, ಹೊರ ಜಿಲ್ಲೆಯ ಕೂಲಿ ಕಾರ್ಮಿಕರಿಗೆ, ನಿರಾಶ್ರಿತರಿಗೆ ಹಾಗೂ ಭಿಕ್ಷುಕರಿಗೆ ಜಿಲ್ಲಾಡಳಿತದ ನೇತೃತ್ವದಲ್ಲಿ ದಿನಸಿ ಸಾಮಾಗ್ರಿಗಳ ವಿತರಣೆ ಹಾಗೂ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಕೂಲಿ ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ದಿನಸಿ ಸಾಮಾಗ್ರಿ, ಆಹಾರ ವಿತರಣೆ: ವೇದವ್ಯಾಸ ಕಾಮತ್ ನಗರದ ಮನಪಾದಲ್ಲಿ ಮಾತನಾಡಿದ ಅವರು, ಆಹಾರ ಸಾಮಾಗ್ರಿಗಳ ವಿತರಣೆಯಲ್ಲಿ 5 ಕೆಜಿ ಅಕ್ಕಿ, ಬೇಳೆ, ಸಕ್ಕರೆ, ಟೀ ಪುಡಿ, ಸಜ್ಜಿಗೆ ಸೇರಿ ಎಂಟು ಸಾಮಾಗ್ರಿಗಳನ್ನ ಅವರಿರುವ ಜಾಗಕ್ಕೆ ಹೋಗಿ ತಲುಪಿಸಲಾಗುವುದು. ಈವರೆಗೆ 815 ಮಂದಿಗೆ ಈ ಆಹಾರ ಸಾಮಾಗ್ರಿಗಳನ್ನು ತಲುಪಿಸಲಾಗಿದೆ. ಅಲ್ಲದೆ, ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿರುವ ಹೊರ ಜಿಲ್ಲೆಯ, ಹೊರ ರಾಜ್ಯದ 2,101 ಕಾರ್ಮಿಕರ ಕುಟುಂಬಗಳನ್ನು ಗುರುತಿಸಲಾಗಿದೆ. ಅವರಿಗೆ ಎರಡು ದಿನಗಳಲ್ಲಿ ಈ ದಿನಸಿ ಸಾಮಾಗ್ರಿಗಳನ್ನ ತಲುಪಿಸಲಾಗುವುದು.
ಅಲ್ಲದೆ ಮುಜರಾಯಿ ಇಲಾಖೆಯ ವತಿಯಿಂದ ಕದ್ರಿ ದೇವಳದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಊಟದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ನಿರಾಶ್ರಿತರು, ಭಿಕ್ಷುಕರು ಹಾಗೂ ದಿನಸಿ ಸಾಮಾಗ್ರಿಗಳನ್ನು ಪಡೆದು ಆಹಾರ ತಯಾರಿ ಮಾಡಲು ಸಾಧ್ಯವಾಗದವರು ಇಲ್ಲಿನ ಆಹಾರದ ವ್ಯವಸ್ಥೆಯ ಸೌಲಭ್ಯ ಪಡೆದುಕೊಳ್ಳಬಹುದು. ಇಂದಿರಾ ಕ್ಯಾಂಟೀನ್ ಮೂಲಕ 413 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಮೋದಿ ಕಿಟ್ ವಿತರಣೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದ್ದು, ಮಂಗಳೂರು ಮನಪಾ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಅಗತ್ಯ ಇರುವ 50 ಕುಟುಂಬಗಳಿಗೆ ಮೋದಿ ಕಿಟ್ ವಿತರಣೆ ಮಾಡಲಾಗಿದೆ.
ಇದನ್ನು 10 ಸಾವಿರಕ್ಕೆ ವಿಸ್ತರಣೆ ಮಾಡುವ ಉದ್ದೇಶ ಇದೆ. ಈ ಮೋದಿ ಕಿಟ್ನಲ್ಲಿ 5ಕೆಜಿ ಅಕ್ಕಿ, 1 ಲೀಟರ್ ಎಣ್ಣೆ, 1 ಕೆಜಿ ಸಕ್ಕರೆ, 1/2 ಕೆಜಿ ಬೆಲ್ಲ, ಯಾವುದಾದರೂ ಒಂದು ಧಾನ್ಯಗಳಿವೆ ಎಂದರು. ಸರ್ಕಾರ ನೀಡುವ ರೇಷನ್ನಲ್ಲಿ ಎರಡು ತಿಂಗಳ ಪಡಿತರವನ್ನ ಇದೇ ತಿಂಗಳು ಕೊಡಲಾಗುತ್ತಿದೆ. ಬಿಪಿಎಲ್ ಕಾರ್ಡುದಾರರಿಗೆ ಒಬ್ಬರಿಗೆ 5 ಕೆಜಿಯಂತೆ 10 ಕೆಜಿ ಅಕ್ಕಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಅಲ್ಲದೆ ಎಪಿಎಲ್ ಕಾರ್ಡುದಾರರಿಗೆ ತಿಂಗಳಿಗೆ 5 ಕೆಜಿ ಅಕ್ಕಿಯಂತೆ 10 ಕೆಜಿ ಅಕ್ಕಿಯನ್ನು ಕೆಜಿಗೆ 15 ರೂ.ನಂತೆ ವಿತರಣೆ ಮಾಡಲಾಗುವುದು ಎಂದರು.