ಮಂಗಳೂರು :ಕೇರಳದ ಕಾಸರಗೋಡು ಮತ್ತು ಮಂಗಳೂರು ನಡುವೆ ಶೈಕ್ಷಣಿಕ, ಆರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ದಿನಂಪ್ರತಿ ಸಾವಿರಾರು ಜನರು ಪ್ರಯಾಣಿಸುತ್ತಾರೆ.
ಕೇರಳ ಭಾಗದಿಂದ ಮಂಗಳೂರಿಗೆ ನೇರ ಬಸ್ ಪ್ರಯಾಣಕ್ಕೆ ತಡೆ ಕೇರಳದಲ್ಲಿ ಕೊರೊನಾ ಹೆಚ್ಚಳದ ಸಂದರ್ಭದಲ್ಲಿ ಬಸ್ ಸಂಚಾರಕ್ಕೆ ತಡೆ (No buses between Mangaluru-Kasaragod) ನೀಡಿ ಮಾಡಲಾದ ಆದೇಶ ಕೊರೊನಾ ಇಳಿಮುಖವಾದರೂ ತೆರವಾಗಿಲ್ಲ. ಇದರಿಂದ ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ವಿದ್ಯಾಭ್ಯಾಸಕ್ಕೆಂದು ಬರುವ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಕೇರಳದಲ್ಲಿ ಕೊರೊನಾ ಹೆಚ್ಚಳವಾಗಿದ್ದ ಸಂದರ್ಭದಲ್ಲಿ ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಂದ್ ( Mangaluru Kasaragod direct bus service stop) ಮಾಡಲಾಗಿತ್ತು.
ಮಂಗಳೂರಿನಿಂದ ಕೇರಳದ ಕಾಸರಗೋಡು ಮಧ್ಯೆ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ಆದೇಶ ಇನ್ನೂ ಮುಂದುವರೆದಿದ್ದು, ಸಾವಿರಾರು ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಆರೋಗ್ಯ ಮತ್ತು ಶಿಕ್ಷಣ ಕಾರಣಕ್ಕೆ ಕೇರಳದ ಕಾಸರಗೋಡು ಜಿಲ್ಲೆಯ ಜನರು ಮಂಗಳೂರನ್ನು ಆಶ್ರಯಿಸಿದ್ದಾರೆ. ಈ ಕಾರಣದಿಂದ ಸಾವಿರಾರು ಜನರು ಮಂಗಳೂರು ಜೊತೆಗೆ ನಂಟು ಹೊಂದಿದ್ದಾರೆ. ಇತ್ತೀಚೆಗೆ ಶಾಲಾ-ಕಾಲೇಜುಗಳು ಆರಂಭವಾಗಿರುವುದರಿಂದ ಕಾಸರಗೋಡು ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಮಂಗಳೂರಿಗೆ ಬರಲು ಸಮಸ್ಯೆ ಅನುಭವಿಸುತ್ತಿದ್ದಾರೆ.
ಇದೀಗ ಕೇರಳದ ಗಡಿ ತಲಪಾಡಿಯವರೆಗೆ ಮಾತ್ರ ಕಾಸರಗೋಡು ಬಸ್ಗಳು ಬರುತ್ತಿವೆ. ಅಲ್ಲಿಯವರೆಗೆ ಬರುತ್ತಿರುವ ವಿದ್ಯಾರ್ಥಿಗಳು ನಂತರ ಅಲ್ಲಿಂದ ನಡೆದುಕೊಂಡು ಕರ್ನಾಟಕ ಗಡಿಗೆ ಬಂದು ಮಂಗಳೂರು ಬಸ್ನಲ್ಲಿ ಹತ್ತಬೇಕು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯದ ವ್ಯರ್ಥವಾಗುತ್ತಿದೆ.
ಕೊರೊನಾ ಹೆಚ್ಚಳದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಜಾರಿಗೊಳಿಸಿದ್ದ ಆದೇಶ ಹಿಂಪಡೆಯಬೇಕು ಎಂಬುದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಆಗ್ರಹ. ಈಗಾಗಲೇ ಕೇರಳದಲ್ಲಿ ಕೋವಿಡ್ ಸಹಜ ಸ್ಥಿತಿಗೆ ಬಂದಿರುವುದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಅರ್ಥೈಸಿ ಜಿಲ್ಲಾಡಳಿತ ನೇರ ಬಸ್ ವ್ಯವಸ್ಥೆಗೆ ಮುಂದಾಗಬೇಕಾಗಿದೆ.