ಮಂಗಳೂರು: ಕ್ರೈಸ್ತರ ಮೇಲೆ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಸಂಸದ ಪ್ರತಾಪ್ ಸಿಂಹರಿಗೆ ತಲೆ ಕೆಟ್ಟಿದೆ. ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಮನೆ ಮನೆಯಲ್ಲಿ ಚಂದಾ ಎತ್ತಿ, ಮೆಂಟಲ್ ಪ್ರತಾಪ್‌ಸಿಂಹ ಅವರಿಗೆ ಮಂಗಳೂರಿನ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್ ಕಿಡಿ ಕಾರಿದರು.
ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಕ್ರೈಸ್ತ ಸಮುದಾಯದ ವಿರುದ್ಧ ಸಂಸದ ಪ್ರತಾಪ್ ಸಿಂಹ ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದಿಂದ ನಗರದ ಮ.ನ.ಪಾ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಶನಿವಾರ ಸಂಜೆ ನಡೆದ ಪ್ರತಿಭಟನಾ ಸಭೆಯಲ್ಲಿ ಮೊಂಬತ್ತಿ ಬೆಳಗಿಸಿ ಅವರು ಮಾತನಾಡಿದರು.
ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಕ್ರೈಸ್ತರ ಕೊಡುಗೆ ಅಪಾರ. ಆದರೆ, ಪ್ರತಾಪ್ ಸಿಂಹ ಅವರು ತಮ್ಮ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ. ಇಂತಹವರಿಗೆ ಕೂಡಲೇ ಸೂಕ್ತ ಚಿಕಿತ್ಸೆ ನೀಡಿದರೆ ಮಾನಸಿಕ ರೋಗ ವಾಸಿಯಾಗಲಿದೆ. ಇಲ್ಲದಿದ್ದರೆ, ಇಂತಹ ದುಷ್ಕೃತ್ಯಗಳು ಮುಂದುವರಿಯುವ ಸಾಧ್ಯತೆ ಇದೆ. ಅವಿವೇಕಿ ಸಂಸದ ರಿಗೆ ಸಂಸತ್‌ನಲ್ಲಿ ಕುಳಿತುಕೊಳ್ಳುವ ಯೋಗ್ಯತೆ ಇಲ್ಲ. ರಾಜ್ಯಪಾಲರು ಕೂಡಲೇ ಸಂಸದರನ್ನು ವಜಾಗೊಳಿಸಬೇಕು ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು, ನೋವಾಗುವಂತೆ ಸಂಸದರು ಹೇಳಿಕೆ ಕೊಟ್ಟಿದ್ದಾರೆ. ಆದ್ದರಿಂದ ಬಿಜೆಪಿಗೆ ಕ್ರೈಸ್ತರ ಮೇಲೆ ಗೌರವ ಇದ್ದರೆ 24 ಗಂಟೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಉಚ್ಛಾಟಿಸಬೇಕು ಎಂದು ಹೇಳಿದರು.
ಇದನ್ನೂ ಓದಿ:ಮಂಡ್ಯ ಸೊಸೆಯಾಗಿ ಹಾವೇರಿಯಿಂದ 'ಒಲವಿನ ಉಡುಗೊರೆ' ಹಿಡಿದು ಬಂದ ಸುಮಲತಾ ಅಭಿಮಾನಿ