ಮಂಗಳೂರು :ಕಾಂಗ್ರೆಸ್ ಮೂರು ಬಾರಿ ಇಬ್ಭಾಗವಾಯಿತು. ಜನತಾದಳ ಹತ್ತಾರು ಬಾರಿ ಒಡೆದು ಹೋಯಿತು. ಇದರಿಂದ ಜನತಾ ಪರಿವಾರವೇ ಮಾಯವಾಯಿತು.
ಆದರೆ, ವಿಚಾರಧಾರೆ ಸಿದ್ಧಾಂತದ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಜೆಪಿಯಲ್ಲಿ ಮಾತ್ರ ಯಾವುದೇ ರೀತಿಯ ಒಡಕು ಮೂಡಿಲ್ಲ. ಬಿಜೆಪಿ ಅಂದಿನಿಂದ ಇಂದಿನವರೆಗೂ ಗುರಿ ಹಾಗೂ ದಾರಿಯನ್ನು ತಪ್ಪದ ಹಿನ್ನೆಲೆ ಎರಡೆರಡು ಬಾರಿ ಅಧಿಕಾರ ಬಂದರೂ, ಪಕ್ಷ ಒಡೆಯಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದರು.
ನರಗದ ಕೊಡಿಯಾಲಬೈಲ್ನಲ್ಲಿರುವ ರಮಣ ಪೈ ಸಭಾಂಗಣದಲ್ಲಿ ನಡೆದ ಬಿಜೆಪಿ-ಕರ್ನಾಟಕ ಪ್ರಕೋಷ್ಠಗಳ ಚಿಂತನ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಇಂದು ತುಷ್ಟೀಕರಣದ ರಾಜಕಾರಣ ಅಂತ್ಯಗೊಂಡು ಧ್ಯೇಯ ಮತ್ತು ದೇಶ ಚಿಂತಿತವಾಗಿರುವ ರಾಜಕಾರಣ ಪ್ರಾರಂಭವಾಗಿದೆ.
ನಿತ್ಯದ ರಾಜಕೀಯ ಕೆಸರೆರಚಾಟ ಮಾಡುವುದು ನಮ್ಮ ರಾಜಕಾರಣವಲ್ಲ. ಸಾಮಾಜಿಕ ಚಿಂತನೆ, ಸಮಾಜ ಸೇವೆ ಪರಿಕಲ್ಪನೆ ಆಧಾರದಲ್ಲಿ ಸೇವಾ ಮತ್ತು ಸಂಘಟನೆಯ ಜವಾಬ್ದಾರಿಯ ಅಡಿಯಲ್ಲಿ ರಾಜಕಾರಣ ಮಾಡುವುದೇ ನಮ್ಮ ಗುರಿ ಎಂದರು.
ಪ್ರಕೋಷ್ಠಗಳ ಚಿಂತನ ವರ್ಗ ಕಾರ್ಯಕ್ರಮ ಉದ್ಘಾಟನೆ ಕಾಂಗ್ರೆಸ್ನ ಆಡಳಿತದ ಆರಂಭದಿಂದ ಮನಮೋಹನ್ ಸಿಂಗ್ (Manmohan Singh) ಕಾಲಘಟ್ಟದವರೆಗೆ ಲಾಲ್ ಬಹದ್ದೂರ್ ಶಾಸ್ತ್ರಿ(Lal Bahadur Shastri) ಬಿಟ್ಟರೆ ಮಿಕ್ಕ ಎಲ್ಲರ ಮೇಲೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee)ಯವರು ತಮ್ಮ ಆಡಳಿತ ಅವಧಿಯಲ್ಲಿ ಹಾಗೂ 2014ರಿಂದ ಈವರೆಗೆ ಪ್ರಧಾನಿ ಮೋದಿ (Narendra Modi) ಅವರು ತಮ್ಮ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದೆ ಆಡಳಿತ ಮಾಡಿ ತೋರಿಸಿದರು.
ಅಲ್ಲದೆ ಜಗತ್ತಿಗೇ ಭಾರತವನ್ನು ಶಕ್ತಿವಂತ ರಾಷ್ಟ್ರವನ್ನಾಗಿ ತೋರಿಸಿದರು. ಹಿಂದೆ ಎಲ್ಲಾ ಪ್ರಧಾನಿಗಳು ಟೋಪಿ ಇಡುವಲ್ಲಿಗೆ ಹೋಗಿ ಟೋಪಿ ಹಾಕಿಕೊಳ್ಳುತ್ತಿದ್ದರು. ಮತ ಧರ್ಮಗಳನ್ನು ಖುಷಿಪಡಿಸಲು ತುಷ್ಟೀಕರಣದ ನೀತಿಯನ್ನು ಅನುಸರಿಸುತ್ತಿದ್ದರು. ಇಂದು ಎಲ್ಲವೂ ಪರಿವರ್ತನೆ ಆಗಿದೆ ಎಂದು ಹೇಳಿದರು.