ಮಂಗಳೂರು :ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮೊದಲು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಮತ್ತೆ ಅವರು ಕಾಂಗ್ರೆಸ್ಗೆ ಬರಲಿ ಎಂದು ಮಾಜಿ ಸಚಿವ ಯು ಟಿ ಖಾದರ್ ಆಹ್ವಾನಿಸಿದರು.
ಖಾದರ್ ಮತ್ತು ರಮಾನಾಥ ರೈ ಹೊರತುಪಡಿಸಿ ಉಳಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸಿ ಎಂದು ಕರೆ ನೀಡಿದ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಳಿನ್ ಕುಮಾರ್ ಕಟೀಲ್ ಅವರು ಮೊದಲು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು.
ವಿನಯಕುಮಾರ್ ಸೊರಕೆ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ವೇಳೆ ದುಡಿದವರು. ಅವರಿಗೆ ಬಿಜೆಪಿಗೆ ಹೋಗಿ ಇಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆಸುವ ಉತ್ಸಾಹವಿದೆ. ಅವರು ಸಂತೋಷದಲ್ಲಿರಬೇಕಾದರೆ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬರಲಿ ಎಂದು ಆಹ್ವಾನ ನೀಡಿದರು.
ಕಟೀಲ್ ವಿರುದ್ಧ ಖಾದರ್ ವಾಗ್ದಾಳಿ ನಡೆಸಿರುವುದು.. ಬಿಜೆಪಿ ಆಡಳಿತದಲ್ಲಿ ಗೋ ಕಳ್ಳತನ ಜಾಸ್ತಿ :ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ ಗೋಕಳವು ಪ್ರಕರಣ ಜಾಸ್ತಿಯಾಗಿದೆ. ಇವರು ಜಾರಿ ಮಾಡಿದ ಗೋಹತ್ಯೆ ನಿಷೇಧ ಕಾನೂನಿನ ಉದ್ದೇಶವೇನು?. ಗ್ರಾಮ ಪಂಚಾಯತ್ ಚುನಾವಣೆ ಹತ್ತಿರ ಬಂತು ಎಂದು ಇದನ್ನು ಜಾರಿ ಮಾಡಲಾಯಿತೆ?. ಸರ್ಕಾರ ಬಂದ ಬಳಿಕ ಕಳವು ಪ್ರಕರಣ ಜಾಸ್ತಿಯಾಗಿವೆ. ಇದರಲ್ಲಿ ಗೋಕಳ್ಳತನ ಅತ್ಯಧಿಕವಾಗಿವೆ. ಇವರು ತಂದ ಕಾನೂನು ಏನಾಯಿತು?. ರಾಜ್ಯದಲ್ಲಿಯೇ 14 ಭೀಫ್ ರಫ್ತು ಮಾಡುವ ಫ್ಯಾಕ್ಟರಿಗಳಿವೆ. ಇವರು ಅದನ್ನು ನಿಷೇಧ ಮಾಡಲಿ ಎಂದು ಆಗ್ರಹಿಸಿದರು.
ಪ್ರಚೋದನಕಾರಿ ಭಾಷಣ ಮತ್ತು ಕೃತ್ಯ ಮಾಡುವವರು ದೇಶದ್ರೋಹಿಗಳು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. 10 ಶೇಕಡ ಜನರು ಸ್ವಪ್ರತಿಷ್ಠೆಗಾಗಿ, ಲಾಭಕ್ಕಾಗಿ ಸಮಾಜಕ್ಕೆ ಗಂಡಾಂತರ ತರುತ್ತಿದ್ದಾರೆ. ಪ್ರಚೋದನಕಾರಿ ಭಾಷಣ ಮತ್ತು ಕೃತ್ಯ ಎಸಗುವವರು ಸಮಾಜದ್ರೋಹಿ ಮತ್ತು ದೇಶದ್ರೋಹಿಗಳಾಗಿದ್ದಾರೆ. ಇವರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೌರವದ ಗೆಲುವು :ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಗೆಲುವು ಸಾಧಿಸುತ್ತಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಮಂಜುನಾಥ್ ಭಂಡಾರಿ ಅವರಿಗೆ ಗೌರವದ ಗೆಲುವು ಸಿಗಬೇಕಾಗಿದೆ. ಪಂಚಾಯತ್‌ನಲ್ಲಿ ವಿಕೇಂದ್ರಿಕರಣದ ಬದಲಿಗೆ ಕೇಂದ್ರೀಕರಣ ಆಡಳಿತ ವ್ಯವಸ್ಥೆ ಮಾಡಿದ ಬಿಜೆಪಿಯ ವಿರುದ್ಧ ಗ್ರಾಮಪಂಚಾಯತ್ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿ ಗೌರವದ ಗೆಲುವಿಗೆ ಮತ ಚಲಾಯಿಸಬೇಕೆಂದು ಕರೆ ನೀಡಿದರು.