ಬಂಟ್ವಾಳ :ಮಂಗಳೂರು-ಹಾಸನ ಸಂಪರ್ಕಿಸುವ ಬಿಸಿರೋಡ್-ಅಡ್ಡಹೊಳೆ ರಸ್ತೆ ಕಾಮಗಾರಿ ಆರಂಭಗೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಬಂಟ್ವಾಳ ತಾಲೂಕಿನ ಹೆದ್ದಾರಿ ಬದಿಯ ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಾಣ ಹಾಗೂ ರಸ್ತೆ ಅಗಲಗೊಳಿಸುವ ಕಾರ್ಯಕ್ಕೆ ಪೂರ್ವಭಾವಿಯಾಗಿ ಕಟ್ಟಡಗಳನ್ನು ಕೆಡವಲಾಗುತ್ತಿದೆ.
ಕಲ್ಲಡ್ಕದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದಂತೆ, ಹಳೆಯ ಕಟ್ಟಡಗಳು ಇತಿಹಾಸದ ಪುಟ ಸೇರುತ್ತಿವೆ. ಬಿ.ಸಿ.ರೋಡ್ನಿಂದ ಪೆರಿಯಶಾಂತಿವರೆಗಿನ 48 ಕಿ.ಮೀ. ಕಾಮಗಾರಿಯನ್ನು ಹೈದರಾಬಾದ್ ಕಂಪನಿಯೊಂದು ವಹಿಸಿಕೊಂಡಿದ್ದರೆ, ಪೆರಿಯಶಾಂತಿಯಿಂದ ಅಡ್ಡಹೊಳೆವರೆಗಿನ 15 ಕಿ.ಮೀ. ಕಾಮಗಾರಿಯನ್ನು ಮಹಾರಾಷ್ಟ್ರದ ಕಂಪನಿ ವಹಿಸಿಕೊಂಡಿದೆ.
ಸದ್ಯ ಕಲ್ಲಡ್ಕ ಪ್ರದೇಶದಲ್ಲಿ ಭೂ ತಾಂತ್ರಿಕ ಪರಿಶೀಲನಾ ಕಾರ್ಯಗಳನ್ನು ಇಲಾಖೆ ನಡೆಸುತ್ತಿದೆ. ಅಭಿವೃದ್ಧಿ ಹಿನ್ನೆಲೆ ರಸ್ತೆ ಪಕ್ಕ ಇರುವ ಅಂಗಡಿ-ಮುಂಗಟ್ಟುಗಳನ್ನು ಕೆಡವಲಾಗುತ್ತಿದೆ. ಪಾಣೆ ಮಂಗಳೂರು, ಕಲ್ಲಡ್ಕ ಸಹಿತ ಹೆದ್ದಾರಿ ಬದಿಯಲ್ಲಿ ಮಾರ್ಕಿಂಗ್ ಮಾಡಿರುವ ಜಾಗಗಳಲ್ಲಿ ಯಂತ್ರಗಳೊಂದಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಬೃಹತ್ ಪಿಲ್ಲರ್ ಅಳವಡಿಕೆಗಾಗಿ ಭೂಮಿಯ ಕಲ್ಲು, ಮಣ್ಣಿನ ಪರೀಕ್ಷಾ ಕಾರ್ಯ ಸಹ ನಡೆಯುತ್ತಿದೆ.