ಮಂಗಳೂರು:ದ.ಕ.ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ 65 ಮಿ.ಮೀ. ಮಳೆ ಸುರಿದಿದ್ದು, ಮುಂಜಾಗ್ರತಾ ಕ್ರಮವಾಗಿ ವಿವಿಧೆಡೆ ಸರ್ವ ವ್ಯವಸ್ಥೆಗಳನ್ನೊಳಗೊಂಡ 7 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಾದ್ಯಂತ ಇಂದು ಇಡೀ ದಿನ ನಿರಂತರವಾಗಿ ಮಳೆ ಸುರಿದಿದೆ. 24 ಗಂಟೆಗಳಲ್ಲಿ ಬೆಳ್ತಂಗಡಿಯಲ್ಲಿ 46 ಮಿ.ಮೀ, ಬಂಟ್ವಾಳ 89 ಮಿ.ಮೀ, ಮಂಗಳೂರು 89 ಮಿ.ಮೀ, ಪುತ್ತೂರು 72 ಮಿ.ಮೀ, ಸುಳ್ಯ 57 ಮಿ.ಮೀ, ಮೂಡುಬಿದಿರೆ 95 ಮಿ.ಮೀ, ಕಡಬದಲ್ಲಿ 49 ಮಿ.ಮೀ ಮಳೆ ಸುರಿದಿದೆ.
ನೇತ್ರಾವತಿ ನದಿಯ ಬಂಟ್ವಾಳದಲ್ಲಿ ಈಗಿನ ನೀರಿನ ಮಟ್ಟ 6.4 ಮೀಟರ್ ಆಗಿದ್ದು, ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ಈಗಿನ ನೀರಿನ ಮಟ್ಟ 27.4 ಮೀಟರ್ ಆಗಿದ್ದು, ಅಪಾಯದ ಮಟ್ಟ 31.5 ಮೀಟರ್ ಆಗಿದೆ. ಕುಮಾರಧಾರ ನದಿಯ ಈಗಿನ ನೀರಿನ ಮಟ್ಟ 24.0 ಮೀಟರ್ ಆಗಿದ್ದು, ಅಪಾಯದ ಮಟ್ಟ 26.5 ಮೀಟರ್ ಆಗಿದೆ. ಗುಂಡ್ಯ ನದಿಯ ಈಗಿನ ನೀರಿನ ಮಟ್ಟ 4.1 ಮೀಟರ್ ಆಗಿದ್ದು, ಅಪಾಯದ ಮಟ್ಟ 5.0 ಮೀಟರ್ ಆಗಿದೆ.
ಏಪ್ರಿಲ್ 1ರಿಂದ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ನಾಲ್ವರು ಮೃತಪಟ್ಟಿದ್ದು, ಓರ್ವನಿಗೆ ಗಾಯಗಳಾಗಿವೆ. ಅಲ್ಲದೆ, ಒಂದು ಹಸು ಮೃತಪಟ್ಟಿದೆ. ಇನ್ನು, ನದಿ ಪಾತ್ರಗಳಗಳಲ್ಲಿ ವಾಸಿಸುತ್ತಿರುವ 185 ಮಂದಿಯನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿದೆ. ಅದಕ್ಕಾಗಿ 7 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೆ, ಜಿಲ್ಲೆಯಾದ್ಯಂತ 34 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 853 ಮನೆಗಳು ಭಾಗಶಃ ಹಾನಿಯಾಗಿದೆ. ಅಪಾಯದಲ್ಲಿರುವವರ ರಕ್ಷಣೆಗಾಗಿ ಈಗಾಗಲೇ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಸಿವಿಲ್ ಡಿಫೆನ್ಸ್ ತಂಡಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.