ಕರ್ನಾಟಕ

karnataka

By

Published : Dec 26, 2019, 10:54 AM IST

Updated : Dec 26, 2019, 1:10 PM IST

ETV Bharat / city

ಗ್ರಹಣದ ದಿನ ಅಂಗವಿಕಲತೆ ನಿವಾರಣೆಗೆ ತಿಪ್ಪೆಯಲ್ಲಿ ಮಕ್ಕಳನ್ನು ಹೂತಿಟ್ಟ ಪೋಷಕರು!

ಸೂರ್ಯಗ್ರಹಣ ಹಿನ್ನೆಲೆ ವಿಶೇಷಚೇತನ ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟರೆ ಅಂಗವಿಕಲತೆ ಸರಿಹೋಗುತ್ತದೆ ಎಂದು ಕಲಬುರಗಿ ಹೊರವಲಯದ ತಾಜಸುಲ್ತಾನಪುರ ಗ್ರಾಮದಲ್ಲಿ ಮೂವರು ಪುಟ್ಟ ಕಂದಮ್ಮಗಳನ್ನು ತಮ್ಮ ಪೋಷಕರು ಕುತ್ತಿಗೆ ತನಕ ಮಣ್ಣು ಹಾಕಿ ಹೂತಿಟ್ಟಿದ್ದಾರೆ.

the-parents-of-the-three-children-were-buried
ಕಸದ ಗುಂಡಿಯಲ್ಲಿ ಮಕ್ಕಳನ್ನು ಹೂತಿಟ್ಟ ಪೋಷಕರು

ಕಲಬುರಗಿ/ವಿಜಯಪುರ:ಸೂರ್ಯಗ್ರಹಣ ಹಿನ್ನೆಲೆ ವಿಶೇಷಚೇತನ ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟರೆ ಅಂಗವಿಕಲತೆ ಸರಿಹೋಗುತ್ತದೆ ಎಂದು ಮೂವರು ಪುಟ್ಟ ಮಕ್ಕಳನ್ನು ಪೋಷಕರು ಹೂತಿಡುವ ಮೂಲಕ ಮೌಢ್ಯತೆ ಮೆರೆದಿದ್ದಾರೆ. ಇಂಥ ವಿಚಿತ್ರ ಘಟನೆ ನಡೆದದ್ದು ಕಲಬುರಗಿ ಹೊರವಲಯದ ತಾಜಸುಲ್ತಾನಪುರ ಗ್ರಾಮದಲ್ಲಿ.

4 ವರ್ಷದ ಸಂಜನಾ, 6 ವರ್ಷದ ಪೂಜಾ ಕ್ಯಾಮಲಿಂಗ್ ಹಾಗು 11 ವರ್ಷದ ಕಾವೇರಿ ಎಂಬ ಮೂವರು ವಿಶೇಷಚೇತನ ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಡಲಾಗಿತ್ತು. ಈ ರೀತಿ ಹುದುಗಿಸಿಟ್ಟರೆ ಮಕ್ಕಳಲ್ಲಿರುವ ಅಂಗವಿಕಲತೆ ನಿವಾರಣೆ ಆಗಲಿದೆ ಎಂಬ ನಂಬಿಕೆ ಹೆತ್ತವರದ್ದಾಗಿದೆ.

ಇದೇ ರೀತಿ ಕಲಬುರಗಿಯ ಅಫಜಲಪೂರದ ಅರ್ಜುಣಗಿ ಗ್ರಾಮದಲ್ಲಿ ಕೂಡಾ ವಿಶೇಷ ಹುಡುಗನನ್ನು ಭೂಮಿಯಲ್ಲಿ ಹುದುಗಿಸಿಡಲಾಗಿದೆ. ಇದಿಷ್ಟೆ ಅಲ್ಲ, ವಿಜಯಪುರ ಜಿಲ್ಲೆಯ ತಾಲೂಕಿನಲ್ಲಿ ಅರ್ಜುನಗಿ ಬಿಕೆ ಗ್ರಾಮದಲ್ಲೂ ಪಪ್ಪು ಕುತುಬುದ್ಧೀನ್ ಮುಲ್ಲಾ( 22) ಹೂತಿಟ್ಟ ವಿಕಲಾಂಗ ಯುವಕನನ್ನೂ ಹೂತಿಟ್ಟ ಅಮಾನವೀಯ ಘಟನೆ ನಡೆದಿದೆ.

ಮಕ್ಕಳನ್ನು ಹೂತಿಟ್ಟ ಪೋಷಕರು

ಮಕ್ಕಳನ್ನು ಹೂತಿಟ್ಟ ದೃಶ್ಯ ನೋಡಲು ಆ ಗ್ರಾಮಸ್ಥರಲ್ಲದೆ, ಸುತ್ತಮುತ್ತ ಗ್ರಾಮಗಳ ಗ್ರಾಮಸ್ಥರ ದಂಡೇ ಅಲ್ಲಿ ನೆರೆದಿತ್ತು. ಮನುಷ್ಯ ಚಂದ್ರನ ಅಂಗಳಕ್ಕೆ ಹೋಗಿ ಬರುವಷ್ಟು ವಿಜ್ಞಾನ ಮುಂದುವರೆದರೂ ಗ್ರಾಮೀಣ ಭಾಗದಲ್ಲಿ ಇನ್ನೂ ಮೌಢ್ಯ ಜೀವಂತ ಇರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ನಮ್ಮ ಮಗಳಿಗೆ ಬಲಗೈ ಮೇಲಕ್ಕೆತ್ತಲು ಸಾಧ್ಯವಾಗುತ್ತಿಲ್ಲ. ನಮಗೆ ಪರಿಚಯಸ್ಥರೊಬ್ಬರು ಈ ರೀತಿ ಮಾಡಿದ್ರೆ ಸಮಸ್ಯೆ ಪರಿಹಾರವಾಗುತ್ತೆ ಎಂದು ಸಲಹೆ ನೀಡಿದ್ರು. ಹಾಗಾಗಿ ಇದೇ ಮೊದಲ ಬಾರಿಗೆ ನನ್ನ ಮಗಳನ್ನು ಈ ರೀತಿ ಕತ್ತಿನ ತನಕ ಮಣ್ಣು ಹಾಕಿ ಹೂತಿದ್ದೇವೆ. ಬೆಳಗ್ಗೆ 8 ಗಂಟೆಯಿಂದ ಗ್ರಹಣ ಮುಗಿಯುವರೆಗೂ ಈ ಸಂಪ್ರದಾಯ ನಡೆಯಲಿದೆ ಎಂದು ಬಾಲಕಿ ಪೋಷಕರೊಬ್ಬರು ತಿಳಿಸಿದ್ರು.

ಈ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ಮಾಹಿತಿ ಅರಿತ ಜನವಾದಿ ಮಹಿಳಾ ಸಂಘಟನೆ ಹಾಗು ಮಕ್ಕಳ ಹಕ್ಕು ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೂವರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಘಟನೆಯಿಂದ ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ತಹಶಿಲ್ದಾರರು, ಪೊಲೀಸ್ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Last Updated : Dec 26, 2019, 1:10 PM IST

ABOUT THE AUTHOR

...view details