ಕಲಬುರಗಿ: ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರು ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ. ಸೀಲ್ಡೌನ್ನಿಂದಾಗಿ ರೈಲಿನಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬಳು ಊಟಕ್ಕಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾವೂರ್ ಗ್ರಾಮದ ನಿವಾಸಿಯಾಗಿರುವ ವೃದ್ಧೆ ಸಿದ್ದಮ್ಮಾ ರೈಲಿನಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದಳು. ಇವಳಿಗೆ ವಿಕಲಚೇತನ ಮಗನಿದ್ದು, ಸೊಸೆ, ಮೊಮ್ಮಕ್ಕಳು ಸಹ ಇದ್ದಾರೆ. ಮಗ ಕೂಡ ಕಾಲು ಕಳೆದುಕೊಂಡು ಏನು ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿದ್ದಾನೆ. ತಾಯಿಯೊಂದಿಗೆ ಆತ ಕೂಡ ರೈಲಿನಲ್ಲಿ ಭಿಕ್ಷೆ ಬೇಡುತ್ತಾನೆ. ಇದೀಗ ಕೊರೊನಾದಿಂದಾಗಿ ರೈಲು, ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಭಿಕ್ಷಾಟನೆಯನ್ನೇ ನಂಬಿ ಬದುಕುತ್ತಿದ್ದ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿದೆ.