ಕಲಬುರಗಿ : ಗ್ರಾಮ ಪಂಚಾಯತ್ ಕಚೇರಿಯ ಅಲ್ಮೇರಾದಲ್ಲಿನ ಕಡತಗಳನ್ನು ಕಳ್ಳತನ ಮಾಡಲಾಗಿದೆ. ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಪಂ ಕಚೇರಿಯಲ್ಲಿ ಈ ಕಳ್ಳತನ ನಡೆದಿದೆ. ಕಚೇರಿಯಲ್ಲಿ ಯಾರೂ ಇಲ್ಲದಿದ್ದಾಗ ಅಲ್ಮೇರಾ ಕೀಲಿ ತೆರೆದು ಕಳ್ಳತನ ಮಾಡಲಾಗಿದೆ. ಕಡತಗಳನ್ನು ಕಳ್ಳತನ ಮಾಡಿ ಚೀಲದಲ್ಲಿ ತುಂಬಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟವಿಯಲ್ಲಿ ಸೆರೆಯಾಗಿರುವ ಕಳ್ಳತನದ ದೃಶ್ಯ ಗ್ರಾಪಂ ಕರ ವಸೂಲಿಗಾರ ಮಹಿಬೂಬ್ ಸಹೋದರ ಶಾರೂಖ್ ತಾಳಿಕೋಟಿ ಎಂಬಾತ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕರ ವಸೂಲಿಗಾರ ಮಹಿಬೂಬ್‌ಗೆ ಇತ್ತೀಚೆಗೆ ಅಪಘಾತವಾಗಿದ್ದು, ರಜೆ ಮೇಲಿದ್ದಾನೆ.
ಅಲ್ಮೇರಾ ಕೀಲಿ ಕೈ ಕೊಟ್ಟು ಕಳುಹಿಸುವಂತೆ ಪಂಚಾಯತ್ ಅಧಿಕಾರಿಗಳು ಹೇಳಿದ್ದಾರೆ. ಆದ್ರೆ, ಮಹಿಬೂಬ್ ತನ್ನ ಸಹೋದರನ ಮುಖಾಂತರ ರಹಸ್ಯವಾಗಿ ಕಡತಗಳನ್ನು ತರಿಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಪ್ರಮುಖ ಕಡತಗಳು ನಾಪತ್ತೆಯಾಗಿವೆ.
ಸದ್ಯ ಈ ಕುರಿತು ವಾಡಿ ಠಾಣೆಯಲ್ಲಿ ಪಿಡಿಒ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ.