ಕಲಬುರಗಿ:ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ್ ನೇತೃತ್ವದ ಆಂತರಿಕ ಸಚಿವಾಲಯದ ತ್ರಿಸದಸ್ಯ ತಂಡ ಗುರುವಾರ ಜಿಲ್ಲೆಗೆ ಭೇಟಿ ನೀಡಿದೆ. ಹೊನ್ನಕಿರಣಗಿ, ಜೇವರ್ಗಿ ಪಟ್ಟಣದಲ್ಲಿ ಬೆಳೆ ಹಾನಿ ಪರಿಶೀಲನೆ ಹಾಗೂ ಮಳೆಯಿಂದ ಬಿದ್ದ ಮನೆಗಳನ್ನು ವೀಕ್ಷಿಸಿದರು.
ಕಳೆದ ಜುಲೈ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ನಾಶವಾದ ಬೆಳೆಗಳ ವೀಕ್ಷಣೆಗೆ ತಂಡ ಆಗಮಿಸಿತ್ತು. ಈ ತಂಡದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್.ಬಿ.ತಿವಾರಿ ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಎಸ್.ಜಗದೀಶ ಇದ್ದರು.
ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದ ತಂಡ: ಆರಂಭದಲ್ಲಿ ಕಲಬುರಗಿ ತಾಲೂಕಿನ ಹೊನ್ನಕಿರಣಗಿಗೆ ಭೇಟಿ ನೀಡಿದ ತಂಡ ಗ್ರಾಮದ ರೈತ ಮಹಿಳೆ ರಸೂಲ್ ಬಿ. ಅವರ 1.30 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಬೆಳೆ ವೀಕ್ಷಿಸಿದರು. ಸ್ಥಳದಲ್ಲಿದ ಕೃಷಿ ಅಧಿಕಾರಿಗಳಿಂದ ಗ್ರಾಮದಲ್ಲಿ ಬಿತ್ತನೆಯಾದ ಪ್ರದೇಶದಲ್ಲಿ ಹಾನಿಯ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು.
ಗ್ರಾಮದಲ್ಲಿ 3,291 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಹತ್ತಿ, ಕಡಲೆ ಬೆಳೆಯಲಾಗಿತ್ತು. ಇದರಲ್ಲಿ 680 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾಳಾಗಿದೆ. 350 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾದ ಹತ್ತಿಯಲ್ಲಿ 50 ಹೆಕ್ಟೇರ್ ಹಾನಿಯಾಗಿದೆ. 1,481 ರೈತರ ಹೊಲಕ್ಕೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಇಲ್ಲಿ ರೈತರು ಎರಡ್ಮೂರು ಬಾರಿ ಬಿತ್ತನೆ ಮಾಡಿದ್ದಾರೆ. ಪ್ರತಿ ಬಾರಿ ಬಿತ್ತನೆಗೆ ಪ್ರತಿ ಎಕರೆಗೆ 4-5 ಸಾವಿರ ರೂ. ವ್ಯಯ ಮಾಡಿದ್ದಾರೆ ಎಂದು ಅಧಿಕಾರಿಗಳಿಗೆ ಪ್ರಭಾರಿ ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಮಾಹಿತಿ ನೀಡಿದರು.