ಕಲಬುರಗಿ:ಕಲ್ಯಾಣ ಕರ್ನಾಟಕದ ಈಡಿಗ ಹೋರಾಟ ಸಮಿತಿ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ತೀವ್ರ ಹೋರಾಟಕ್ಕೆ ಧುಮುಕಿದೆ. ಬೇಡಿಕೆಗಳಿಗಾಗಿ ನಿರಂತರ ಹೋರಾಟ, ಪಾದಯಾತ್ರೆ ಮಾಡಿದರೂ ಸರ್ಕಾರ ಸ್ಪಂದಿಸದ ಕಾರಣ ಪ್ರಣವಾನಂದ ಸ್ವಾಮೀಜಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಬಹುಭಾಷಾ ನಟ ಸುಮನ್ ಕೂಡ ಸಾಥ್ ನೀಡಿದ್ದಾರೆ.
ರಾಜ್ಯದಲ್ಲಿ ನಿಷೇಧ ಮಾಡಿರುವ ಸೇಂದಿ ಮಾರಾಟ ಹಾಗೂ ನಾರಾಯಣ ಗುರು ನಿಗಮ ಮಂಡಳಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರಣವಾನಂದ ಸ್ವಾಮೀಜಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಸ್ವಾಮೀಜಿ ಕಳೆದ ತಿಂಗಳಷ್ಟೇ ಸುಮಾರು 178 ಕಿಲೋ ಮೀಟರ್ ನಡೆದು ಸರ್ಕಾರಕ್ಕೆ ಒತ್ತಾಯಿಸಿದ್ದರು ಆದರೆ ಅದು ಫಲ ನೀಡ ಹಿನ್ನಲೆಯಲ್ಲಿ ಉಪವಾಸ ಮಾಡುವ ಮುಖಾಂತರ ಹೋರಾಟಕ್ಕೆ ಮುಂದಾಗಿದ್ದಾರೆ.
ಮನವೊಲಿಸಲು ಯತ್ನ:ಶ್ರೀಗಳ ಉಪವಾಸ ಸತ್ಯಾಗ್ರಹಕ್ಕೆ ಕಾಂಗ್ರೆಸ್ ನಾಯಕರು, ಆರ್ಯ ಈಡಿಗ ಸಮುದಾಯ ಸಂಪೂರ್ಣ ಬೆಂಬಲ ನೀಡಿದ್ದು, ಹೋರಾಟ ತೀವ್ರಗೊಳ್ಳುತ್ತಿದೆ. ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಸಂಸದ ಉಮೇಶ್ ಜಾಧವ್ ಶ್ರೀಗಳ ಮನವೊಲಿಸುವ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ. ಈಡಿಗ ಸಮದಾಯದ ಮಂತ್ರಿ, ಶಾಸಕರ ವಿರುದ್ದ ಗುಡುಗಿದ ಶ್ರೀಗಳು, ಸರ್ಕಾರದಿಂದ ಬೇಡಿಕೆ ಈಡೆರಿಸುವ ಭರವಸೆ ಸಿಗೋವರೆಗೂ ಉಪವಾಸ ಸತ್ಯಾಗ್ರಹ ನಿಲ್ಲೋದಿಲ್ಲ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.