ಕರ್ನಾಟಕ

karnataka

ETV Bharat / city

ಕೊಟ್ಟ ಸಾಲ ವಾಪಸ್​ ಕೇಳಿದ್ದಕ್ಕೆ ಕಟ್ಟಿದ್ರು ಚಟ್ಟ.. ಕಲಬುರಗಿಯಲ್ಲಿ ಸ್ನೇಹಿತನನ್ನೇ ಅಪಹರಿಸಿ ಬರ್ಬರ ಕೊಲೆ!

ಪಡೆದ ಸಾಲ ವಾಪಸ್ ನೀಡದೆ ಸ್ನೇಹಿತನನ್ನೇ ಅಪಹರಿಸಿ ಹತ್ಯೆಗೈದು ಶವವನ್ನು ಕಲಬುರಗಿಯ ಮರ್ತೂರು ಗ್ರಾಮದ ಬಳಿಯ ರೈಲ್ವೆ ಹಳಿ ಮೇಲೆ ಬಿಸಾಡಿ ಹೋಗಿರುವ ಘಟನೆ ನಡೆದಿದೆ.

murder
ಚನ್ನಬಸಪ್ಪ

By

Published : Jul 15, 2021, 5:41 PM IST

ಕಲಬುರಗಿ: ಜಿಲ್ಲೆಯನ್ನು ಬೆಚ್ಚಿಬೀಳಿಸುವಂತ ಮತ್ತೊಂದು ಘಟನೆ ನಡೆದಿದೆ. ವ್ಯಕ್ತಿಯನ್ನು ಅಪಹರಿಸಿ ಹತ್ಯೆಗೈದು ಶವವನ್ನು ರೈಲ್ವೆ ಹಳಿ ಮೇಲೆ ಬಿಸಾಡಿ ಹೋಗಿರುವ ಪ್ರಕರಣ ಜಿಲ್ಲೆಯ ಶಹಬಾದ್‌ ತಾಲೂಕಿನ ಮರ್ತೂರು ಬಳಿ ನಡೆದಿದೆ.

ಜೇವರ್ಗಿ ತಾಲೂಕಿನ ಬಿಲ್ಲಾಡ್ ಗ್ರಾಮದ ಚನ್ನಬಸಪ್ಪ ನಾಯ್ಕೋಡಿ (35) ಕೊಲೆಯಾದ ವ್ಯಕ್ತಿ. ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಚನ್ನಬಸಪ್ಪ, ಪಕ್ಕದ ಗ್ರಾಮದ ಸ್ನೇಹಿತ ಲಕ್ಷ್ಮಣ ಎಂಬಾತನಿಗೆ 2 ಲಕ್ಷ ರೂ. ಮತ್ತು 10 ಗ್ರಾಂ ಚಿನ್ನವನ್ನು ಸಾಲದ ರೂಪದಲ್ಲಿ ನೀಡಿದ್ದ. ಆದರೆ ಪಡೆದ ಸಾಲ ವಾಪಸ್ ನೀಡದೆ ಚನ್ನಬಸಪ್ಪನಿಗೆ ಕಳೆದ ಮೂರು ವರ್ಷಗಳಿಂದ ಲಕ್ಷ್ಮಣ ಸತಾಯಿಸುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ ಈ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ಕೂಡ ನಡೆದಿತ್ತು ಎನ್ನಲಾಗಿದೆ.

ಚನ್ನಬಸಪ್ಪ ನಾಯ್ಕೋಡಿ ಕೊಲೆ ಕುರಿತು ಮಾಹಿತಿ ನೀಡಿದ ಕುಟುಂಬಸ್ಥರು

ಕಳೆದ 10ನೇ ತಾರೀಖಿನಂದು ಮನೆಗೆ ಕಿಟಕಿ ಮತ್ತು ಬಾಗಿಲು ತರಲೆಂದು ಚನ್ನಬಸಪ್ಪ ಜೇರಟಗಿ ಗ್ರಾಮಕ್ಕೆ ಹೋಗಿದ್ದರು. ಈ ವೇಳೆ ಲಕ್ಷ್ಮಣ ಮತ್ತು ತಂಡ, ಚನ್ನಬಸಪ್ಪನನ್ನು ಕಾರಿನಲ್ಲಿ ಅಪಹರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಆರೋಪಿಗಳು, ಶವವನ್ನು ಕಲಬುರಗಿಯ ಮರ್ತೂರು ಗ್ರಾಮದ ಬಳಿಯ ರೈಲ್ವೆ ಹಳಿ ಮೇಲೆ ತಂದು ಬಿಸಾಕಿದ್ದಾರೆ.

ನಸುಕಿನ ಜಾವ ರೈಲೊಂದು ಶವದ ಮೇಲೆ ಹೋಗಿದ್ದರಿಂದ ಚನ್ನಬಸಪ್ಪ ಮೃತದೇಹ ಛಿದ್ರ ಛಿದ್ರವಾಗಿದೆ. ವಿಷಯ ತಿಳಿದು ಕೂಡಲೇ ವಾಡಿ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಶವದ ಗುರುತು ಪತ್ತೆಗಾಗಿ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇತ್ತ ಚನ್ನಬಸಪ್ಪ ಕಾಣೆಯಾಗಿರುವ ಬಗ್ಗೆ ಮನೆಯವರು ನೇಲೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಚನ್ನಬಸಪ್ಪ ಕುಟುಂಬಸ್ಥರು ಮೃತದೇಹವನ್ನು ಗುರುತು ಹಚ್ಚಿದ್ದಾರೆ.

ಈ ಕುರಿತು ವಾಡಿ ರೈಲ್ವೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

ABOUT THE AUTHOR

...view details