ಹುಬ್ಬಳ್ಳಿ:ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಲಾಕ್ಡೌನ್ ಸಡಿಲಿಕೆಯನ್ನು ಜನರು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಬೆಂಗಳೂರಿನಲ್ಲಿ ಸೋಂಕು ಹೆಚ್ಚಾದ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ಬೇರೆ ರಾಜ್ಯದವರು ಬಂದ ಮೇಲೆ ಈ ಅವಾಂತರ ಸೃಷ್ಟಿಯಾಗಿದೆ. ಜನರು ಕೂಡ ಸ್ವಯಂ ಪ್ರೇರಿತರಾಗಿ ನಿಯಂತ್ರಣ ಹಾಕಿಕೊಳ್ಳಬೇಕು ಎಂದರು.
ಮುಂದೆ ಮುಖ್ಯಮಂತ್ರಿಯಾಗುತ್ತೇನೆ ಎಂಬ ಉಮೇಶ್ ಕತ್ತಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿ ಹೇಳಿಕೆ ಎಂದರು. ವಿಧಾನ ಪರಿಷತ್ಗೆ ನಾಮ ನಿರ್ದೇಶಿತ ಸದಸ್ಯರ ಆಯ್ಕೆ ಬಗ್ಗೆ ಮಾತನಾಡಿ, ಉತ್ತರ ಕರ್ನಾಟಕದವರಿಗೆ ಒತ್ತು ನೀಡುವಂತೆ ಒತ್ತಾಯ ಮಾಡ್ತೀವಿ. ರಾಜ್ಯಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದವರಿಗೆ ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿದರು.
ಕೊರೊನಾ ಯಾರನ್ನೂ ಬಿಟ್ಟಿಲ್ಲ, ವೈದ್ಯಕೀಯ ಶಿಕ್ಷಣ ಸಚಿವರ ಕುಟುಂಬದವರಿಗೂ ಸೋಂಕು ತಗುಲಿದೆ. ಜನರು ಜಾಗೃತರಾದಾಗ ಮಾತ್ರ ಪರಿಹಾರ ಸಾಧ್ಯ. ಬೇರೆ ರಾಜ್ಯಗಳಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಆ ರಾಜ್ಯಗಳಿಗೆ ಕೇಂದ್ರ ಸರ್ಕಾರಗಳಿಗೆ ಅಭಿನಂದನೆ ಸಲ್ಲಿಸಿಲ್ಲ. ಕೊರೊನಾ ತಡೆಗಟ್ಟುವ ವಿಚಾರದಲ್ಲಿ ಕರ್ನಾಟಕದ ಮಾದರಿ ಅನುಸರಿಸಿ ಎಂದಿದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು. ಅವರು ರಾಜ್ಯ ಸರ್ಕಾರವನ್ನು ಹೊಗಳುವುದಕ್ಕೆ ಬರಲ್ಲ. ಅನಿವಾರ್ಯವಾಗಿ ತೆಗಳಬೇಕು. ಡಿಕೆಶಿ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾಂಗ್ರೆಸ್ನಲ್ಲಿ ಕಾರ್ಯಕರ್ತರೇ ಇಲ್ಲ. ಅದು ನಾಯಕರಿಂದ ತುಂಬಿರುವ ಪಕ್ಷ. ಕೆಡರ್ ಇಲ್ಲ ಅಂದ ಮೇಲೆ ಪಾರ್ಟಿ ಕಟ್ಟಲು ಸಾಧ್ಯವಿಲ್ಲ ಎಂದರು.