ಹುಬ್ಬಳ್ಳಿ: ಕೊರೊನಾ ಮಹಾಮಾರಿ ಭಯದಿಂದ ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳ ಗುಂಪೊಂದು ಸರ್ಕಾರಿ ಶಾಲೆಯನ್ನೇ ಮದ್ಯಪಾನ ಹಾಗೂ ದುಶ್ಚಟಗಳ ಅಡ್ಡೆ ಮಾಡಿಕೊಂಡಿದ್ದಾರೆ.
ಸರ್ಕಾರಿ ಶಾಲೆ ಜೂಜಾಟದ ಅಡ್ಡೆಯನ್ನಾಗಿಸಿಕೊಂಡ ಪುಂಡರು : ಕ್ಯಾರೆ ಎನ್ನುತ್ತಿಲ್ಲವಂತೆ ಹುಬ್ಬಳ್ಳಿ ಪೊಲೀಸರು - ಹುಬ್ಬಳ್ಳಿ ನಂಬರ್ 4 ಸರ್ಕಾರಿ ಶಾಲೆ
ಕೋವಿಡ್-19 ಕಾವಿಗೆ ಹುಬ್ಬಳ್ಳಿಯನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸದ್ಯ ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕೆಲ ಪುಂಡರು ಸರ್ಕಾರಿ ಶಾಲೆಯನ್ನೇ ಜೂಜು ಮತ್ತು ಮದ್ಯಪಾನದ ಅಡ್ಡೆಯನ್ನಾಗಿ ಬಳಸಿಕೊಂಡಿದ್ದಾರೆ. ಈ ಕುರಿತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು ಯಾರೂ ಕ್ರಮಕೈಗೊಂಡಿಲ್ಲ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.
ವೀರಾಪುರ ಓಣಿ
ನಗರದ ವಾರ್ಡ್ ನಂಬರ್ 57 ವೀರಾಪುರ ಓಣಿಯಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ನಂಬರ್ 4 ರ ಸರ್ಕಾರಿ ಶಾಲೆಯಲ್ಲಿ ಕೆಲ ದುಷ್ಕರ್ಮಿಗಳು ಇಸ್ಪೀಟ್ ಆಟ, ಮದ್ಯ, ಗಾಂಜಾ, ಹೀಗೆ ಹಲವಾರು ಕೆಟ್ಟ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಸ್ಥಳೀಯರು ಈ ಕುರಿತು ಹಲವು ಬಾರಿ ಪೊಲೀಸರಿಗೆ ಹಾಗೂ ಜನ ಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೆ.
ಆದರೆ, ಈ ಕುರಿತು ಯಾರು ತಲೆಕೆಡಿಸಿಕೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.