ಹುಬ್ಬಳ್ಳಿ:ಕರ್ನಾಟಕ ರಾಷ್ಟ್ರ ಸಮಿತಿಯು ರಾಜ್ಯದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಸ್ಪರ್ಧಿಸಲಿದ್ದು, ಅದಕ್ಕಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಹೇಳಿದ್ದಾರೆ.
ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಕರ್ನಾಟಕ ರಾಷ್ಟ್ರ ಸಮಿತಿ ಸ್ಪರ್ಧಿಸಲಿದೆ: ರವಿಕೃಷ್ಣ ರೆಡ್ಡಿ ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ಸ್ಥಾಪನೆಗೊಂಡ ಪಕ್ಷ ಕರ್ನಾಟಕ ರಾಷ್ಟ್ರ ಸಮಿತಿ. ಪಕ್ಷ ಸ್ಥಾಪನೆಗೊಂಡು ಕೆಲವೇ ಕೆಲವು ತಿಂಗಳು ಆಗಿದ್ದರೂ ಸಮಾಜಪರ ಹೋರಾಟದ ಮೂಲಕ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಪಕ್ಷವನ್ನು ರಾಜ್ಯದಲ್ಲಿ ವಿಸ್ತರಿಸುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಈಗಾಗಲೇ ಘೋಷಿಸಿರುವ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಈಗಾಗಲೇ ಸಂಭವನೀಯ ಅಭ್ಯರ್ಥಿಗಳನ್ನು ಗುರುತಿಸಿಸಲಾಗಿದೆ ಎಂದು ಹೇಳಿದರು.
ಮಹಾಲಕ್ಷ್ಮೀ ಲೇಔಟ್, ಕೆ.ಆರ್. ಪುರ, ಹಿರೇಕೆರೂರು, ವಿಜಯನಗರ ಮತ್ತು ಕಾಗವಾಡ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ರಾಜ್ಯ ಚುನಾವಣೆ ಆಯೋಗವು ಘೋಷಿಸಿರುವ 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಲಾಗುತ್ತಿದ್ದು, ಅದರಂತೆ ಹು-ಧಾ ಮಹಾನಗರ ಪಾಲಿಕೆ ಸೇರಿದಂತೆ ದಾವಣಗೆರೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಇನ್ನು, ನೆರೆ ಪರಿಹಾರದಲ್ಲಿ ರಾಜಕೀಯ ಪಕ್ಷಗಳು ತಾರತಮ್ಯ ಮಾಡುತ್ತಿವೆ ಎಂದು ಆರೋಪಿಸಿದ ರವಿಕೃಷ್ಣ ರೆಡ್ಡಿ, ಇದರಂದ ನಿರಾಶ್ರಿತರು ಕಂಗಾಲಾಗಿದ್ದು, ಜೆಸಿಬಿ ಪಕ್ಷಗಳಿಗೆ ಜನರು ಪಾಠ ಕಲಿಸಬೇಕು ಎಂದರು.