ಹುಬ್ಬಳ್ಳಿ :ಮಹಾನಗರ ಪಾಲಿಕೆ ಕಾರ್ಪೊರೇಟರ್‌ಗಳ ಅದೃಷ್ಟವೋ, ದುರಾದೃಷ್ಟವೋ ಗೊತ್ತಿಲ್ಲ. ಕಾರ್ಪೊರೇಟರ್‌ಗಳಿದ್ದರೂ ಅಧಿಕಾರಿಗಳೇ ಮತ್ತೆ ಪಾಲಿಕೆಯಲ್ಲಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. ಜನರಿಂದ ಚುನಾಯಿತರಾದರೂ ಜನಪ್ರತಿನಿಧಿಗಳಿಗೆ ಅಧಿಕಾರ ಇಲ್ಲವಾಗಿದೆ.
ಕಳೆದ 5 ತಿಂಗಳ ಹಿಂದೆ ಕಾರ್ಪೊರೇಟರ್‌ಗಳನ್ನ ಆಯ್ಕೆ ಮಾಡಲಾಗಿತ್ತು. 2022-23ನೇ ಸಾಲಿನ ಪಾಲಿಕೆಯ ಬಜೆಟ್, ಪಾಲಿಕೆ ನೂತನ ಸದಸ್ಯರ ನೇತೃತ್ವದಲ್ಲಿ ಮಂಡನೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಇದೆಲ್ಲವನ್ನೂ ರಾಜ್ಯ ಸರ್ಕಾರ ಹುಸಿಗೊಳಿಸಿದೆ.
ಪಾಲಿಕೆಯಲ್ಲಿ ಬಜೆಟ್ ಕರಡು ಪ್ರತಿ ಸಿದ್ಧಗೊಂಡು ಕಮಿಷನರ್ ಕಚೇರಿಗೆ ಬಂದಿದೆ. ಆಯುಕ್ತರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಪ್ರತಿಯನ್ನು ಅಂತಿಮಗೊಳಿಸಿ ಅನುಮೋದನೆಗೆ ಆಡಳಿತಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತರ ಮೂಲಕ ಸರ್ಕಾರಕ್ಕೆ ಕಳಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ.
ಓದಿ:ಫೆ.11ರವರೆಗೂ ರೋಡ್ ಶೋ, ರ್‍ಯಾಲಿಗಳ ಮೇಲೆ ಕೇಂದ್ರ ಚುನಾವಣಾ ಆಯೋಗ ನಿರ್ಬಂಧ
ಬಜೆಟ್‌ಗೆ ಪೂರ್ವಭಾವಿಯಾಗಿ ಔಪಚಾರಿಕ ಸಾರ್ವಜನಿಕರ ಸಭೆ ಕರೆದು ಅವರಿಂದ ಸಲಹೆ-ಸೂಚನೆ ಸಂಗ್ರಹಿಸಲಾಗುತ್ತಿತ್ತು. ಬೆಳಗಾವಿ ಪಾಲಿಕೆಯಲ್ಲಿಈಗಾಗಲೇ ಸಾರ್ವಜನಿಕರಿಂದ ಬಜೆಟ್ ಕುರಿತು ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಜನವರಿ ತಿಂಗಳು ಮುಗಿದರೂ ಹುಬ್ಬಳ್ಳಿ-ಧಾರವಾಡ ಪಾಲಿಕೆಯಿಂದ ಬಜೆಟ್ನ ಶಿಷ್ಟಾಚಾರ ಕೂಡ ನಡೆಯಲಿಲ್ಲ.
ಕಳೆದ ವರ್ಷದ ಬಜೆಟ್‌ನಲ್ಲಿ ಬೆಂಗಳೂರಿನ ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ತಲಾ ಒಂದು ರಸ್ತೆ ಅಭಿವೃದ್ಧಿಗೆ ಯೋಜಿಸಿತ್ತು. ಬೆಳಗಾವಿ ಮಾದರಿಯಲ್ಲಿ ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಬಜಾರ್ ಸ್ಥಾಪಿಸುವುದಾಗಿ ಹೇಳಲಾಗಿತ್ತು. 20 ಕೋಟಿ ರೂ. ವೆಚ್ಚದಲ್ಲಿ ಉದ್ಯಾನಗಳ ಅಭಿವೃದ್ಧಿ ಮಾಡುವುದಾಗಿ ಪಾಲಿಕೆ ಬಜೆಟ್‌ನಲ್ಲಿ ತಿಳಿಸಲಾಗಿತ್ತು. ಈ ಕೆಲಸಗಳು ನಡೆದಿವೆಯೇ ಎಂಬುದು ಗಮನಿಸಬೇಕಿದೆ.
ಪಾಲಿಕೆಯ ತೆರಿಗೆ ಹಾಗೂ ವಿವಿಧ ಸಂಪನ್ಮೂಲಗಳ ಮೂಲಕ 219 ಕೋಟಿ ರೂ. ಮೊತ್ತವನ್ನು ಸಂಗ್ರಹಿಸುವ ಗುರಿ ಹೊಂದಿತ್ತು. ವಿವಿಧ ಯೋಜನೆಗಳಡಿ ರಾಜ್ಯ ಸರಕಾರದಿಂದ 450 ಕೋಟಿ ರೂ. ಬರಲಿದೆ ಎಂದು ನಿರೀಕ್ಷೆ ಮಾಡಿತ್ತು. ಪಾಲಿಕೆಯ ಸೈಟ್ ಮಾರಾಟ ಮಾಡಿ ಕೋಟಿಗಟ್ಟಲೇ ಹಣ ಸಂಗ್ರಹಿಸಿದ್ದು, ಸಾರ್ವಜನಿಕರಿಗೆ ಮಾತ್ರ ತಿಳಿದಿದೆ. ಕಳೆದ ಸಾಲಿನ ಖರ್ಚು ವೆಚ್ಚದ ಬಗ್ಗೆ ಬಜೆಟ್‌ಗೆ ಅನುಮೋದನೆ ದೊರೆತ ಬಳಿಕವೇ ತಿಳಿಯಲಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ