ಹುಬ್ಬಳ್ಳಿ(ಧಾರವಾಡ): ಹುಬ್ಬಳ್ಳಿಯಲ್ಲಿ ಕ್ರೈಂ ಪ್ರಕರಣಗಳ ತನಿಖೆ ಹಾಗೂ ನ್ಯಾಯದಾನ ತ್ವರಿತಗತಿಯಲ್ಲಿ ನಡೆಯಬೇಕು ಎನ್ನುವ ಕಾರಣಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಕಟ್ಟಡ ಸಿದ್ದಗೊಳ್ಳುತ್ತಿದೆ. ಬೆಂಗಳೂರು ಲ್ಯಾಬ್ ಹೊರತು ಪಡಿಸಿದರೆ ಪ್ರಮುಖ ವಿಭಾಗಗಳು ಇಲ್ಲಿ ಕಾರ್ಯನಿರ್ವಹಿಸಲಿವೆ.
ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸಂಗ್ರಹಿಸಿದ ಸಾಕ್ಷ್ಯದ ವೈಜ್ಞಾನಿಕ ವರದಿ ಪಡೆಯಲು ಲ್ಯಾಬ್ನ ಅಗತ್ಯತೆ ಹೆಚ್ಚು. ಆದರೆ, ಈ ಭಾಗದಲ್ಲಿ ಕೇವಲ ಎರಡು ಪ್ರಯೋಗಾಲಯಗಳು ಇರುವುದರಿಂದ ಸಹಜವಾಗಿ ಒತ್ತಡ ಹೆಚ್ಚಿತ್ತು. ಇದರಿಂದಾಗಿ ಸಕಾಲದಲ್ಲಿ ಫೊರೆನ್ಸಿಕ್ ವರದಿ ತಲುಪದೇ ಅದೆಷ್ಟೋ ತನಿಖೆಗಳು ವಿಳಂಬವಾಗಿದ್ದವು.
ಕಳೆದ ಮೂರು ವರ್ಷದ ಹಿಂದೆ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ರಿಪೋರ್ಟ್ ಬರುವುದು ತಡವಾಯಿತು. ಅಷ್ಟರಲ್ಲಿ ಆರೋಪಿ ರಾಜ್ಯ ಬಿಟ್ಟು ಪರಾರಿ ಆಗಿದ್ದ. ಈ ರೀತಿಯ ಘಟನೆಗಳು ಮರುಕಳಿಸಬಾರದೆಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಘಟಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು.