ಧಾರವಾಡ:ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಹಿನ್ನೆಲೆ ರೈತರು ನಡು ರಸ್ತೆಯಲ್ಲಿಯೇ ಪಲಾವ್ ಸೇವಿಸಿ ಪ್ರತಿಭಟನೆ ನಡೆಸಿದರು.
ರಸ್ತೆಯಲ್ಲೇ ಪಲಾವ್ ಸೇವಿಸಿ ರೈತರ ಪ್ರತಿಭಟನೆ ಧಾರವಾಡದ ಜುಬ್ಲಿ ವೃತ್ತದಿಂದ ನಗರದ ಪ್ರಮುಖ ಕಡೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಜುಬ್ಲಿ ವೃತ್ತಕ್ಕೆ ಆಗಮಿಸಿದ ರೈತರು ಹಾಗೂ ರೈತ ಸಂಘಟನೆಗಳ ಸದಸ್ಯರು, ತಾವೇ ತಯಾರಿಸಿದ ಪಲಾವ್ ಸೇವಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರೈತರ ಹೋರಾಟ ಬೆಂಬಲಿಸಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರೂ ಸಹ ರೈತರೊಂದಿಗೆ ನಡು ರಸ್ತೆಯಲ್ಲಿಯೇ ಪಲಾವ್ ಸೇವಿಸಿದರು. ಈ ಸಂದರ್ಭ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕೆಲ ಹೊತ್ತು ವಾಗ್ವಾದ ನಡೆಯಿತು.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಬಂದ್ ಕಾವು: ಅರೆಬೆತ್ತಲೆ ಪ್ರತಿಭಟನೆ
ಜುಬ್ಲಿ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಪೊಲೀಸರು ಪ್ರತಿಭಟನೆ ಮುಕ್ತಾಯ ಮಾಡಿ ಎಂದು ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸದ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಪ್ರತಿಭಟನೆ ಹಿಂಪಡೆಸಿದರು.