ಹುಬ್ಬಳ್ಳಿ: ರಾಜ್ಯ ಸರ್ಕಾರ ಯಾವ ರೀತಿಯಾಗಿ ಫೋನ್ ಕದ್ದಾಲಿಕೆ, ಐಎಂಎ ಹಗರಣವನ್ನು ಸಿಬಿಐಗೆ ಒಪ್ಪಿಸಿದೆಯೋ ಅದೇ ರೀತಿಯಾಗಿ ಡಿ.ಕೆ.ಶಿವಕುಮಾರ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ತನಿಖೆ ನಡೆಸಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ತೊಡಗಿದ್ದ ಡಿ.ಕೆ.ಶಿವಕುಮಾರ್ ಬಗ್ಗೆ ಐದು ವರ್ಷಗಳಿಂದ ಸುದೀರ್ಘವಾಗಿ ಸರ್ಕಾರಕ್ಕೆ ಮನವಿ ಸೇರಿದಂತೆ ದಾಖಲಾತಿಗಳ ಸಂಗ್ರಹಣೆ ಹಾಗೂ ವಿಶ್ಲೇಷಣೆ ಮಾಡಿರುವುದಕ್ಕೆ ಜಯ ಸಿಕ್ಕಿದೆ. ಇದೀಗ ಡಿಕೆಶಿ ಅವರನ್ನು ದೆಹಲಿಯ ತಿಹಾರ್ ಜೈಲಿಗೆ ಹಾಕಲಾಗಿದೆ. ಇದನ್ನು ರಾಜ್ಯ ಸರ್ಕಾರ ಈ ಹಿಂದೆಯೇ ಮಾಡಬೇಕಿತ್ತು. ಆದ್ರೆ, ವಿಳಂಬವಾದರೂ ನಮ್ಮ ಧೋರಣೆಯಂತೆಯೇ ನಡೆಯುತ್ತಿದೆ. ಜೊತೆಗೆ ಡಿ.ಕೆ.ಶಿವಕುಮಾರ 1989 ರಿಂದ 2019 ರವರೆಗೆ 30 ವರ್ಷಗಳ ಕಾಲ ದೇಶ ಹೊರದೇಶಗಳಲ್ಲಿ ಅಕ್ರಮ ಸಂಪಾದನೆ ಮಾಡಿದ ಅವ್ಯವಹಾರಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು. ಸಿಬಿಐ ಡಿ.ಕೆ.ಶಿ ವಿರುದ್ಧ ಭ್ರಷ್ಟಾಚಾರ ಕಾಯಿದೆ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ಅವ್ಯವಹಾರಗಳ ಒಟ್ಟು ಹಣವನ್ನು ಜಪ್ತಿ ಮಾಡಿಕೊಂಡು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದ್ರು.