ಹುಬ್ಬಳ್ಳಿ:ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಜಾರಿಗೊಳಿಸಲಾಗಿರುವ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡವರು, ನಿರಾಶ್ರಿತರಿಗೆ ಆಹಾರ ಕಿಟ್ಗಳ ವಿತರಣೆಯಲ್ಲಿ ಪ್ರತಿಷ್ಠೆಯನ್ನು ದಾಳವಾಗಿಸಿಕೊಂಡು ಕೈ-ಕಮಲ ರಾಜಕೀಯ ಕೆಸರೆರೆಚಾಟ ನಡೆಸಿವೆ.
ಆಹಾರ ಕಿಟ್ ವಿತರಣೆಯಲ್ಲಿ 'ನಾವೇ ಮೇಲಗೈ' ಎಂದು ಫೇಸ್ಬುಕ್ನಲ್ಲಿ ಬಿಜೆಪಿ-ಕಾಂಗ್ರೆಸ್ ನಾಯಕರ ನಡುವೆ ವಾರ್ ನಡೆದಿದೆ. ದಿನಸಿ ವಿತರಣೆಯನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಎರಡೂ ಪಕ್ಷಗಳ ಮುಖಂಡರು ನಾವೇ ಕಿಟ್ ವಿತರಣೆ ಮಾಡಿದ್ದು, ನೀವು ಮನೆ ಬಿಟ್ಟು ಹೊರಬಂದೇ ಇಲ್ಲ ಎಂದು ವಾಗ್ವಾದ ನಡೆಸಿದ್ದಾರೆ.
ದಿನಸಿ ಕಿಟ್ ವಿತರಿಸಿದ್ದು ನಾವು ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಬಿಜೆಪಿ ನಾಯಕರು ಮನೆಯ ಹೊಸ್ತಿಲು ಕೂಡ ದಾಟಿಲ್ಲ. ಎಲ್ಲಾ ನಾವೇ ವಿತರಿಸಿದ್ದು ಎಂದು ಕೈ ಪಾಳಯ ಹೇಳುತ್ತಿದೆ. ಇದನ್ನೆಲ್ಲಾ ನೋಡಿದರೆ ನಿರಾಶ್ರಿತರಿಗೆ ಸಹಾಯ ಹಸ್ತ ಚಾಚಿರುವುದು ರಾಜಕೀಯ ಹಿತದೃಷ್ಟಿಯಿಂದ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಅಚ್ಚರಿ ಏನೆಂದರೆ, ಎರಡೂ ಪಕ್ಷಗಳು ವಿತರಿಸುತ್ತಿರುವುದು ಇನ್ಫೋಸಿಸ್ ಸಂಸ್ಥೆ ನೀಡಿದ ಕಿಟ್ಗಳನ್ನು. ಸಂಸ್ಥೆಯ ಹೆಸರನ್ನು ಬದಿಗಿಟ್ಟು ತಾವೇ ಸ್ವತಃ ಹಂಚುತ್ತಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಪಕ್ಷಗಳ ನಾಯಕರು. ಬೇರೆಯವರು ಕೊಟ್ಟ ಕಿಟ್ ಕೊಟ್ಟು ಎದೆ ತಟ್ಟಿಕೊಳ್ಳುತ್ತಿರುವ ಉಭಯ ಪಕ್ಷಗಳ ನಾಯಕರ ಈ ಮೇಲಾಟ ನಗೆ ಪಾಟಲಿಗೀಡಾಗಿದೆ.
ವಿಡಿಯೋ ಕರೆ ಮೂಲಕ ದಿನಸಿ ವಿತರಣೆ ಕುರಿತು ಮಾಹಿತಿ ನೀಡುತ್ತಿರುವ ಕಾಂಗ್ರೆಸ್ ನಾಯಕ ಸಾಮಾಜಿಕ ಜಾಲತಾಣದಲ್ಲಿ 'ಕಿಟ್ ವಾರ್' ಪುಕ್ಕಟೆ ಮನರಂಜನೆ ನೀಡುತ್ತಿರುವುದರ ಜೊತೆಗೆ ಬಲಗೈಯಲ್ಲಿ ಕೊಟ್ಟದನ್ನು ಎಡಗೈಗೆ ತಿಳಿಯಬಾರದು ಎಂಬ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಯಾರೋ ಮಾಡಿದ ಸಹಾಯವನ್ನು ತಮ್ಮದೆಂದು ಹೇಳಿಕೊಳ್ಳುತ್ತಿರುವುದು ಅಸಹ್ಯಕರ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.