ಧಾರವಾಡ: ವಿದ್ಯಾರ್ಥಿಗಳಲ್ಲಿ ಮತ್ತು ವೈದ್ಯರಲ್ಲಿ ಹೆಚ್ಚು ಕೋವಿಡ್ ಪ್ರಕರಣ ಪತ್ತೆಯಾದ ಹಿನ್ನೆಲೆ ಕಳೆದ ನ. 25ರಿಂದ ಧಾರವಾಡಎಸ್ಡಿಎಮ್ ಮಹಾವಿದ್ಯಾಲಯವನ್ನು ಬಂದ್ ಮಾಡಲಾಗಿದೆ.
ಸೋಂಕಿತ ವಿದ್ಯಾರ್ಥಿಗಳು ಇರುವ ಎರಡು ವಸತಿ ನಿಲಯಗಳನ್ನು ಮಾತ್ರ ನಿಯಮಾನುಸಾರ ಸೀಲ್ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಡಿಸಿ ನಿತೇಶ್ ಪಾಟೀಲ ಸ್ಪಷ್ಟಣೆ :ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ, ಮಕ್ಕಳ, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಎಸ್ಡಿಎಮ್ ಆಸ್ಪತ್ರೆಯ ಸಮೀಪದಲ್ಲಿರುವ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಡಿ.1ರವರೆಗೆ ತರಗತಿಗಳನ್ನು ನಡೆಸದಂತೆ, ತೆರೆಯದಂತೆ ಸೂಚಿಸಲಾಗಿತ್ತು. ಆದರೆ, ಜಿಲ್ಲಾಡಳಿತದಿಂದ ಯಾವುದೇ ಇತರೆ ಪ್ರದೇಶ ಅಥವಾ ವಿದ್ಯಾಲಯದ 500 ಮೀಟರ್ ವ್ಯಾಪ್ತಿಯಲ್ಲಿ ಸೀಲ್ಡೌನ್ ಮಾಡಿದ ಕುರಿತು ಆದೇಶ ಹೊರಡಿಸಿರುವುದಿಲ್ಲ.
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹಾಗೂ ಕೋವಿಡ್ ಪ್ರಸರಣವಾಗದಂತೆ ತಡೆಯಲು ಎಸ್ಡಿಎಮ್ ಆಸ್ಪತ್ರೆಯ ಹೊರ ರೋಗಿಗಳ ಚಿಕಿತ್ಸಾ ವಿಭಾಗವನ್ನು ಮತ್ತು ಹೊಸ ರೋಗಿಗಳ ಅಡ್ಮಿಶನ್ ಮಾಡುವುದನ್ನು ಕೆಲವು ದಿನಗಳ ಕಾಲ ನಿಲ್ಲಿಸಲಾಗಿದೆ. ಉಳಿದಂತೆ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆ, ಉದ್ಯಮಗಳನ್ನು ತೆರೆಯಲು ಅನುಮತಿಸಲಾಗಿದೆ ಎಂದಿದ್ದಾರೆ.
ಕೋವಿಡ್ ಮುನ್ನೆಚ್ಚರಿಕೆ ಕ್ರಮ :ಹೆಗ್ಗಡೆ ಕಲಾಕ್ಷೇತ್ರದ ಆವರಣ ಮತ್ತು ಒಳಾಂಗಣದಲ್ಲಿ ಈಗಾಗಲೇ 2-3 ಬಾರಿ ಸ್ಯಾನಿಟೈಸೇಶನ್ ಮಾಡಲಾಗಿದೆ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮದುವೆ, ಸಭೆಗಳಿಗೆ ಅನುಮತಿ ನೀಡಲಾಗುತ್ತಿದೆ. ಹೆಗ್ಗಡೆ ಕಲಾಕ್ಷೇತ್ರದಲ್ಲಿನ ಕಾರ್ಯಕ್ರಮಗಳಿಗೆ ಆಗಮಿಸುವವರಿಗೆ ಆಗಮನ ಮತ್ತು ನಿರ್ಗಮನಕ್ಕೆ ಇರುವ ಸ್ಥಳವು ಪ್ರತ್ಯೇಕವಾಗಿರುತ್ತದೆ. ಕಳೆದ ರವಿವಾರದಿಂದ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ.