ಹುಬ್ಬಳ್ಳಿ: ಕೊರೊನಾ ಎರಡನೇ ಅಲೆ ಜಿಲ್ಲೆಯಲ್ಲಿ ಭಯಾನಕವಾಗಿದೆ. ಕೊರೊನಾದಿಂದ ಜನರು ತಮ್ಮ ಜೀವನ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಾಗಿದೆ.
ಒಂದು ಕಡೆ ಆಕ್ಸಿಜನ್ ಸಮಸ್ಯೆ ಆದ್ರೆ, ಇನ್ನೊಂದು ಕಡೆ ವೆಂಟಿಲೇಟರ್ ಸಹ ಸಿಗುತ್ತಿಲ್ಲ. ಧಾರವಾಡ ಜಿಲ್ಲೆಯಲ್ಲಿ ವೆಂಟಿಲೇಟರ್ ಇದ್ರು ಸಹ ಅದು ಸರಿಯಾಗಿ ಬಳಕೆಯಾಗುತ್ತಿಲ್ಲ. ಹೀಗಾಗಿಯೇ ಕಳೆದ ತಿಂಗಳಿಗಿಂತ ಈ ತಿಂಗಳ ಸಾವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ಕೊರೊನಾ ವೈರಸ್ನಿಂದಾಗಿ ಸಾವಿನ ಪ್ರಮಾಣವೂ ಸಹ ಹೆಚ್ಚಾಗಿದೆ. ಅದರಲ್ಲೂ ಧಾರವಾಡ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಕಳೆದ ತಿಂಗಳಿಗಿಂತಲೂ ಈ ತಿಂಗಳಲ್ಲಿ ಡಬಲ್ ಆಗಿದೆ. ಕಳೆದ ತಿಂಗಳಿಗಿಂತ ಈ ತಿಂಗಳಲ್ಲೇ ಹೆಚ್ಚಿನ ಸಾವು ಸಂಭವಿಸಿದೆ. 27 ದಿನದಲ್ಲಿ ಕೋವಿಡ್ಗೆ ಬಲಿಯಾಗಿದ್ದು, ಬರೋಬ್ಬರಿ 205 ಜನ.
ಹೌದು, ಕಳೆದ ತಿಂಗಳಿಂದ ಕೋವಿಡ್ ತನ್ನ ಅಟ್ಟಹಾಸವನ್ನ ತೋರಿಸುತ್ತಾ ಬಂದಿದೆ. ಅದರಂತೆ ಕಳೆದ ತಿಂಗಳಿಗೆ ಹೋಲಿಸಿದ್ರೆ 77 ಇದ್ದ ಸಾವಿನ ಸಂಖ್ಯೆ ಈ ತಿಂಗಳ 27ರವರೆಗೆ 205 ಜನರನ್ನು ಬಲಿ ಪಡೆದಿದೆ.
ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವೇನು ಗೊತ್ತಾ?
ಕಳೆದ ತಿಂಗಳಿಗಿಂತ ಈ ತಿಂಗಳು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣ ಹುಡುಕುತ್ತಾ ಹೋದ್ರೆ, ಪ್ರಮುಖವಾಗಿ ಕಾಣುವುದೇ ಕಿಮ್ಸ್ನಲ್ಲಿನ ವೆಂಟಿಲೇಟರ್ ಬಳಕೆ. ಹೌದು, 170 ವೆಂಟಿಲೇಟರ್ಗಳನ್ನ ಹೊಂದಿರುವ ಹುಬ್ಬಳ್ಳಿಯ ಕಿಮ್ಸ್ನಲ್ಲಿ 107 ಮಾತ್ರ ಕೋವಿಡ್ಗೆ ಮೀಸಲಾಗಿದೆ. ಆದ್ರೆ ಉಳಿದ ವೆಂಟಿಲೇಟರ್ಗಳನ್ನ ಬಳಕೆ ಮಾಡಿಕೊಳ್ಳಲು ಟೆಕ್ನಿಷಿಯನ್ಸ್ ಕೊರತೆ ಇದೆಯಂತೆ.
ಹೀಗಾಗಿಯೇ ಸ್ಥಳೀಯ ತಾಲೂಕುಮಟ್ಟದ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ವೆಂಟಿಲೇಟರ್ ಆಪರೇಟರ್ಗಳ ಕೊರತೆ ಇದ್ದು, ಅವುಗಳ ಸಮರ್ಪಕ ಬಳಕೆಯಾಗುತ್ತಿಲ್ಲ ಅಂತ ಸ್ವತಃ ಜಿಲ್ಲಾಡಳಿತವೇ ಒಪ್ಪಿಕೊಂಡಿದೆ. ಹೀಗಾಗಿಯೇ ವೆಂಟಿಲೇಟರ್ ಅವಶ್ಯಕತೆ ಇದ್ದ ಸೋಂಕಿತರು ಉಸಿರಾಟದ ತೊಂದರೆಯಾದ್ರೆ ವೆಂಟಿಲೇಟರ್ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದ್ದು, ಸಾವು ಸಹ ಸಂಭವಿಸುತ್ತಿವೆ ಎನ್ನಲಾಗುತ್ತಿದೆ.
ಕಿಮ್ಸ್ನಲ್ಲಿ ವೆಂಟಿಲೇಟರ್ ಇದ್ದರೂ ಸಹ ಅವುಗಳ ಬಳಕೆಯನ್ನು ಇನ್ನಾದ್ರೂ ವೈದ್ಯರು ನುರಿತರನ್ನ ನೇಮಿಸಿ ಬಳಕೆ ಮಾಡಿಕೊಳ್ಳಬೇಕಿದೆ. ಈಗಾಗಲೇ ಸಾವಿನ ಪ್ರಮಾಣ ಹೆಚ್ಚಾಗಿದ್ದು, ಅದನ್ನ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ.