ಹುಬ್ಬಳ್ಳಿ:ಮೀಸಲಾತಿ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಅವಳಿ ನಗರ ಮಹಾನಗರ ಪಾಲಿಕೆಯ ಮೇಯರ್-ಉಪ ಮೇಯರ್ ಚುನಾವಣೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮೇಯರ್-ಉಪಮೇಯರ್ ಚುನಾವಣೆ ನಡೆಸದಂತೆ ಅರ್ಜಿದಾರರಾದ ಕಿರಣ್ ಸಾಮ್ರಾಣಿ ಹಾಗೂ ಅಲ್ತಾಫ್ ಕಿತ್ತೂರ ಆಗ್ರಹಿಸಿದ್ದಾರೆ.
ಈಗಾಗಲೇ ಮೀಸಲಾತಿ ಹಾಗೂ ವಾರ್ಡ್ ವಿಂಗಡಣೆ ಸೇರಿದಂತೆ ಚುನಾವಣೆಯೇ ಅಸಂವಿಧಾನಿಕವಾಗಿ ನಡೆದಿದ್ದು, ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿ ಇರುವಾಗಲೇ ಮೇಯರ್-ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿ ಮಾಡಿರುವುದು ಸರಿಯಲ್ಲ. ಕೋರ್ಟ್ನಲ್ಲಿ ವಿಚಾರಣೆಯಲ್ಲಿ ಇರುವಾಗಲೇ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಯರ್- ಉಪಮೇಯರ್ ಆಯ್ಕೆಗೆ ಮತ್ತೊಂದು ವಿಘ್ನ ಮೇಲ್ಮನವಿ: ಪಾಲಿಕೆ ವಾರ್ಡ್ಗಳ ಮೀಸಲಾತಿ ಸಮರ್ಪಕವಾಗಿ ನಡೆದಿಲ್ಲ. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಇದೇ ಕಾರಣಕ್ಕೆ ಗೋವಾದಲ್ಲಿ ಚುನಾವಣಾ ಪ್ರಕ್ರಿಯೆ ರದ್ದುಗೊಳಿಸಲಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಇಡೀ ಚುನಾವಣಾ ಪ್ರಕ್ರಿಯೆ ರದ್ದುಗೊಳಿಸುವಂತೆ ಮನವಿ ಮಾಡಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿರುವಾಗ ಮೇಯರ್, ಉಪಮೇಯರ್ ಚುನಾವಣೆ ಘೋಷಣೆಯಾಗಿದೆ. ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗುವುದು. ಮೇ 25 ರಂದು ಮೇಲ್ಮನವಿ ಸಲ್ಲಿಸುವುದಾಗಿ ಅರ್ಜಿದಾರರು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಮೇಯರ್-ಉಪ ಮೇಯರ್ ಚುನಾವಣೆ ನಡೆಸದಂತೆ ಅವರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಚುನಾಯಿತರಾಗಿ ಮನೆಯಲ್ಲಿ ಕುಳಿತಿದ್ದ ಪಾಲಿಕೆ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿಯೇ ಕೋರ್ಟ್ ವಿಷಯದಿಂದ ಮತ್ತೆ ತಲೆ ಬಿಸಿಯಾಗುವಂತಾಗಿದೆ. ಈ ಬಗ್ಗೆ ಕೋರ್ಟ್ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಸಿಸೇರಿಯನ್ಗೆ ಒಳಗಾದ ಬಾಣಂತಿಯರ ನರಳಾಟ.. ಚುರುಕುಗೊಂಡ ತನಿಖೆ