ಹುಬ್ಬಳ್ಳಿ:ರಾಜ್ಯದಲ್ಲಿ ಚಿತ್ರಕಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಸುಮಾರು ಹತ್ತು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದರೂ ನೇಮಕಾತಿ ಪ್ರಕ್ರಿಯೆ ಮಾತ್ರ ನಡೆದಿಲ್ಲ ಎಂದು ಚಿತ್ರಕಲಾ ಶಿಕ್ಷಕರು ಆರೋಪಿಸಿದ್ದಾರೆ.
ಚಿತ್ರಕಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಗೊಂದಲ ಎಎಂಜಿಡಿ ಕೋರ್ಸ್ ಕಲಿತು ನೇಮಕಾತಿಗೆ ಎದುರು ನೋಡುತ್ತಿದ್ದವರಿಗೆ ಪ್ರತಿಬಾರಿಯೂ ನಿರಾಸೆಯಾಗುತ್ತಿದೆ. ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಇಂದು ಬರುತ್ತೆ, ನಾಳೆ ಬರುತ್ತೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದರೂ ಕೂಡ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ಮನೆಗೆ ಕಳುಹಿಸುತ್ತಿದ್ದಾರೆ ಎಂದು ಚಿತ್ರಕಲಾ ವಿಭಾಗದಲ್ಲಿ ಅಧ್ಯಯನ ಮಾಡಿದ ಶಿಕ್ಷಕರು ದೂರಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ವಸತಿ ಶಿಕ್ಷಣ ಸಂಸ್ಥೆಗೆ ನೇಮಕಾತಿ ಅಧಿಸೂಚನೆಯನ್ನು 2011ರಲ್ಲಿಯೇ ಹೊರಡಿಸಲಾಗಿದೆ. ಹಾಗಿದ್ದರೂ ಕೂಡ, ಇದುವರೆಗೂ ಚಿತ್ರಕಲಾ ವಿಭಾಗದಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸದೇ ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ಸಿಇಟಿ ಮೂಲಕ ಆಯ್ಕೆ ಎಂದು ಹೇಳುತ್ತಿದ್ದಾರೆ. ಇದರಿಂದ ನಮ್ಮ ಬದುಕಿಗೆ ನೆಲೆ ಇಲ್ಲದಂತಾಗಿದೆ.
ಶಿಕ್ಷಣದಲ್ಲಿ ದೈಹಿಕ ಶಿಕ್ಷಣ ಎಷ್ಟು ಮುಖ್ಯವೋ, ಚಿತ್ರಕಲಾ ಶಿಕ್ಷಣವೂ ಅಷ್ಟೇ ಮುಖ್ಯ. ಆದರೂ ಕೂಡ ಸರ್ಕಾರ ಚಿತ್ರಕಲಾ ಶಿಕ್ಷಕರ ನೇಮಕಾತಿಯಲ್ಲಿ ಗೊಂದಲವನ್ನು ಸೃಷ್ಟಿಸಿದ್ದು, ಹಲವು ವರ್ಷಗಳಿಂದ ಕೆಲಸ-ಕಾರ್ಯವಿಲ್ಲದೆ ನಿರುದ್ಯೋಗಿಗಳಾಗಿದ್ದೇವೆ. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಚಿತ್ರಕಲಾ ಶಿಕ್ಷಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಬೆರಳುಗಳ ಅಂದ ಹೆಚ್ಚಿಸಲು ನೈಲ್ ಆರ್ಟ್ ಮೊರೆ ಹೋಗುತ್ತಿರುವ ಮಹಿಳಾಮಣಿಗಳು!