ಕರ್ನಾಟಕ

karnataka

ETV Bharat / city

ಮಹಾನಗರ ಪಾಲಿಕೆಯಿಂದ ಭೂ ಸಮೃದ್ಧಿ: ಕಸದಲ್ಲಿಯೇ ರಸ ತೆಗೆಯುವ ಪ್ರಯತ್ನದತ್ತ ಪಾಲಿಕೆ - Hubballi Corporation

ಸುಮಾರು 80 ಟನ್ ಗೊಬ್ಬರ ದಾಸ್ತಾನಿದೆ. ಇನ್ನು ಹುಬ್ಬಳಿಯಲ್ಲಿ ಇದೀಗ 40 ಟನ್ ಸಿದ್ಧವಾಗಿದೆ. ಸಮರ್ಪಕವಾಗಿ ರೈತರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಭೂ ಸಮೃದ್ಧಿ ಎಂದು ಬ್ರಾಂಡಿಂಗ್ ಮಾಡಲಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಹೇಳಿದ್ದಾರೆ.

composting-in-hubli-corporation
ಕಸದಲ್ಲಿಯೇ ರಸ ತೆಗೆಯುವ ಪ್ರಯತ್ನದತ್ತ ಹುಬ್ಬಳ್ಳಿ ಪಾಲಿಕೆ

By

Published : May 7, 2022, 6:09 PM IST

ಹುಬ್ಬಳ್ಳಿ:ಅದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ಆ ಪಾಲಿಕೆ ಇಷ್ಟು ದಿನ ತ್ಯಾಜ್ಯ ಸಂಗ್ರಹಣೆ ಕಾರ್ಯವನ್ನು ಮಾತ್ರ ಮಾಡುತ್ತಿತ್ತು. ಆದರೆ, ಈಗ ವಿನೂತನ ಪ್ರಯೋಗದಿಂದ ರೈತ ಸಮುದಾಯಕ್ಕೆ ಆಸರೆಯಾಗಿದೆ. ಹಸಿ ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಮಹಾನಗರ ಪಾಲಿಕೆಯ ಯೋಜನೆ ಆರಂಭಗೊಂಡಿದ್ದು, ಮಾರುಕಟ್ಟೆಗೆ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲು ಪಾಲಿಕೆ ಸಿದ್ಧವಾಗಿದೆ.

ಭೂ ಸಮೃದ್ಧಿ ಬ್ರಾಂಡ್​ ಹೆಸರಲ್ಲಿ ಕಾಂಪೋಸ್ಟ್ ಗೊಬ್ಬರವನ್ನು ಕೈಗೆಟುಕುವ ದರದಲ್ಲಿ ನೀಡುವ ಚಿಂತನೆಯನ್ನು ಪಾಲಿಕೆ ಹೊಂದಿದೆ. ಬರೋಬ್ಬರಿ ಐದು ವರ್ಷಗಳ ನಂತರ ಯೋಜನೆ ಸಾಕಾರಗೊಂಡಿದ್ದು, ರೈತ ಸಮುದಾಯಕ್ಕೆ ಪಾಲಿಕೆ ತಯಾರಿಸಿದ ಗೊಬ್ಬರ ದೊರೆಯಲಿದೆ. ಮಹಾನಗರದ ಘನ ತ್ಯಾಜ್ಯ ಸಮರ್ಪಕ ನಿರ್ವಹಣೆಗಾಗಿ ಪಾಲಿಕೆ ಸಮಗ್ರ ಘನತ್ಯಾಜ್ಯ ಯೋಜನೆ ರೂಪಿಸಿತ್ತು.

ಕಸದಲ್ಲಿಯೇ ರಸ ತೆಗೆಯುವ ಪ್ರಯತ್ನದತ್ತ ಹುಬ್ಬಳ್ಳಿ ಪಾಲಿಕೆ

ಹಸಿ ತ್ಯಾಜ್ಯದಿಂದ ಸಾವಯವ ಗೊಬ್ಬರ, ಒಣ ತ್ಯಾಜ್ಯದಿಂದ ಸಿಮೆಂಟ್ ಕಂಪನಿಗಳಿಗೆ ಅಗತ್ಯವಾದ ಪರ್ಯಾಯ ಇಂಧನ ಸಿದ್ಧಪಡಿಸುವುದು ಯೋಜನೆಯಲ್ಲಿತ್ತು. ಈ ಮೂಲಕ ಮಹಾನಗರದ ಸ್ವಚ್ಛತೆ ಪ್ರಮುಖ ಉದ್ದೇಶವಾಗಿತ್ತು. ಇದಕ್ಕಾಗಿ ಸುಮಾರು 65 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾದ ಯೋಜನೆ ಇದೀಗ ಕಾರ್ಯರೂಪಕ್ಕೆ ಬಂದಿದೆ. ಇದೀಗ ಮೊದಲ ಹಂತದಲ್ಲಿ ಹಸಿ ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಲಾಗುತ್ತಿದ್ದು, ಭೂ ಸಮೃದ್ಧಿ ಹೆಸರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ ಎಂದು ಹು - ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ತಿಳಿಸಿದರು.

ಹುಬ್ಬಳ್ಳಿಯಲ್ಲಿ ದಿನಕ್ಕೆ ಸುಮಾರು 60-70 ಟನ್ ಹಾಗೂ ಧಾರವಾಡದಲ್ಲಿ 30-35 ಟನ್ ಹಸಿ ತ್ಯಾಜ್ಯ ದೊರೆಯುತ್ತಿದೆ. ಈಗಾಗಲೇ ಧಾರವಾಡದಲ್ಲಿ ಮತ್ತು ಹುಬ್ಬಳ್ಳಿ ಘಟಕದಲ್ಲಿ ಕಳೆದ ಎರಡು ತಿಂಗಳಿನಿಂದ ಕಾಂಪೋಸ್ಟ್ ಗೊಬ್ಬರ ಘಟಕ ನಡೆಯುತ್ತಿದೆ. ಕಳೆದ ಐದು ವರ್ಷಗಳ ಹಿಂದೆ ಆರಂಭದಲ್ಲಿ ಪಾಲಿಕೆ ಕಚೇರಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡು ನಂತರ ಬೇಡಿಕೆ ಆಧಾರದ ಮೇಲೆ ಹೊರಗಡೆ ಕೇಂದ್ರಗಳನ್ನು ಆರಂಭಿಸುವ ಗುರಿಯಿದೆ.

ಹುಬ್ಬಳ್ಳಿ ಹಾಗೂ ಧಾರವಾಡದ ಎರಡು ಘಟಕಗಳನ್ನು ಸದ್ಯಕ್ಕೆ ಪಾಲಿಕೆ ಸಿಬ್ಬಂದಿ ಮೂಲಕ ನಿರ್ವಹಿಸಲಾಗುತ್ತಿದೆ. ಪ್ರಾಯೋಗಿಕ ಹಂತವಾಗಿರುವುದರಿಂದ ಇನ್ನೂ ಪರಿಣಾಮಕಾರಿಯಾಗಿ ಕಾಂಪೋಸ್ಟ್ ಗೊಬ್ಬರ ಉತ್ಪಾದನೆ ಆಗುತ್ತಿಲ್ಲ. ಘಟಕಗಳ ಸಾಮರ್ಥ್ಯದ ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳಬೇಕಾದರೆ ಹೆಚ್ಚಿನ ಪ್ರಮಾಣದ ಮಾನವ ಸಂಪನ್ಮೂಲದ ಅಗತ್ಯವಿದೆ.

ಪ್ರಾಥಮಿಕ ಹಂತದಲ್ಲಿ ಹಸಿ ಹಾಗೂ ಒಣ ತ್ಯಾಜ್ಯ ಪ್ರತ್ಯೇಕವಾಗಿ ನೀಡುವುದರಿಂದ ಪರಿಣಾಮಕಾರಿ ಹಾಗೂ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿದೆ. ಸುಮಾರು 80 ಟನ್ ಗೊಬ್ಬರ ದಾಸ್ತಾನಿದೆ. ಇನ್ನು ಹುಬ್ಬಳಿಯಲ್ಲಿ ಇದೀಗ 40 ಟನ್ ಸಿದ್ಧವಾಗಿದೆ. ಸಮರ್ಪಕವಾಗಿ ರೈತರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಭೂ ಸಮೃದ್ಧಿ ಎಂದು ಬ್ರಾಂಡಿಂಗ್​ ಮಾಡಲಾಗಿದೆ ಎಂದರು.

ಒಟ್ಟಿನಲ್ಲಿ ನಿರ್ವಹಣಾ ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ ಕೈಗೆಟುಕುವ ದರದಲ್ಲಿ ಮಾರಾಟ ಮಾಡುವ ಇಂಗಿತ ಪಾಲಿಕೆಗಿದೆ. ಸದ್ಯಕ್ಕೆ ಪ್ರತಿ ಕೆಜಿಗೆ 2.16 ರೂ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಗೊತ್ತಿರುವ ರೈತರು, ಜನರು ಧಾರವಾಡದಲ್ಲಿ ಖರೀದಿ ಮಾಡುತ್ತಿದ್ದಾರೆ. ಇದನ್ನು 50 ಹಾಗೂ 15 ಕೆಜಿ ಬ್ಯಾಗ್‌ನಲ್ಲಿ ಮಾರಾಟ ಮಾಡುವ ಚಿಂತನೆಯನ್ನು ಮಹಾನಗರ ಪಾಲಿಕೆ ಹೊಂದಿದೆ.

ಇದನ್ನೂ ಓದಿ:ಇದು 'ಮಾವು' ಆದರೂ 'ಹಣ್ಣಲ್ಲ'.. ಸೌತೆಕಾಯಿಯ ಸ್ವಾದ ನೀಡುವ 'ರಾಣಿ ರಾಮಣ್ಣ'

ABOUT THE AUTHOR

...view details