ಹುಬ್ಬಳ್ಳಿ: ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿರುವ ಹಿನ್ನೆಲೆ ಪದವಿಪೂರ್ವ ಶಿಕ್ಷಣ ಇಲಾಖೆಯ ಕೋರಿಕೆಯಂತೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ 114 ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ್ ತಿಳಿಸಿದ್ದಾರೆ.
ಇನ್ನು ಕಲಘಟಗಿಯಿಂದ 35, ಕುಂದಗೋಳದಿಂದ 34, ನವಲಗುಂದದಿಂದ 15, ಅಣ್ಣಿಗೇರಿಯಿಂದ 30 ಬಸ್ಗಳನ್ನು ನಿಯೋಜಿಸಲಾಗಿದೆ. ಎಲ್ಲಾ ಬಸ್ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ ಎಂದಿದ್ದಾರೆ.
ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ ಸಿಂಪಡಿಸಿ ಸ್ಯಾನಿಟೈಸ್ ಮಾಡಲಾಗಿರುತ್ತದೆ. ವಿವಿಧ ಊರುಗಳಿಂದ ಪರೀಕ್ಷಾ ಕೇಂದ್ರಗಳಿರುವ ಸ್ಥಳಗಳಿಗೆ ಮಾರ್ಗ ನಕ್ಷೆ ರೂಪಿಸಲಾಗಿದ್ದು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅವಶ್ಯವಿರುವಷ್ಟು ಬಸ್ಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.
ಕೆಲವು ಬಸ್ಗಳು ರಾತ್ರಿಯೇ ಘಟಕಗಳಿಂದ ಹೊರಟು ತಾಲೂಕು ಕೇಂದ್ರಗಳಲ್ಲಿ ತಂಗುತ್ತವೆ. ಇನ್ನುಳಿದ ಬಸ್ಗಳು ಬೆಳಗಿನ ಜಾವ ಘಟಕಗಳಿಂದ ಹೊರಟು ನಿಗದಿತ ಸಮಯದಲ್ಲಿ ವಿವಿಧ ಊರುಗಳಿಗೆ ತೆರಳಿ ಅಲ್ಲಿಂದ ಪರೀಕ್ಷಾರ್ಥಿಗಳನ್ನು ಹತ್ತಿಸಿಕೊಂಡು ನಿಗಧಿತ ಪರೀಕ್ಷಾ ಕೇಂದ್ರಗಳಿಗೆ ಬರಲಿವೆ ಎಂದರು.
ಬಸ್ಗಳ ಸುಗಮ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಸಾರಿಗೆ ಸಂಸ್ಥೆಯಿಂದ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದಿದ್ದಾರೆ.