ದಾವಣಗೆರೆ: ಹೋರಾಟದ ಸಂದರ್ಭದಲ್ಲಿ ಅನೇಕ ಆಮಿಷಗಳು ಬಂದರೂ ಕೂಡ ಬೇರೆ ಸ್ವಾಮೀಜಿಗಳಂತೆ ನಾನು ಹೋರಾಟದಿಂದ ಓಡಿ ಹೋಗಲಿಲ್ಲ ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ವೇದಿಕೆ ಭಾಷಣ ಮಾಡಿದ ಅವರು, ಇದೇ ಕಾರಣಕ್ಕೆ ಇಲ್ಲಿನ ಜನರು ಇಂದು ಗೌರವ ನೀಡಿದ್ದಾರೆ. ಬೇರೆ ಸ್ವಾಮೀಜಿಗಳಂತೆ ಇಟ್ಟಿಗೆ, ಸಿಮೆಂಟ್‌ನಿಂದ ಮಠ ಕಟ್ಟಬೇಕು ಎಂಬ ಆಸೆ ಇಲ್ಲ. ಈ ಸಮಾಜದ ಜನರ ಸಂಕಷ್ಟಗಳಿಗೆ ಸ್ಪಂದಿಸುವುದೇ ನನ್ನ ಕರ್ತವ್ಯ ಎಂದರು.
ಶಿಫಾರಸು, ರಾಜಕಾರಣ ಮಾಡುವುದು ಮಠಗಳ ಕಾರ್ಯವಲ್ಲ. ಪಂಚಮಸಾಲಿಗಳನ್ನು ಮುಖ್ಯಮಂತ್ರಿ ಮಾಡುವುದು ನಮ್ಮ ಪ್ರತಿಜ್ಞೆ ಅಲ್ಲ. ಬದಲಾಗಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ದೊರಕಿಸಿಕೊಡುವುದು, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಿಸುವ ವ್ಯವಸ್ಥೆ ಮಾಡುವುದು ನಮ್ಮ ಪ್ರತಿಜ್ಞೆ. ಕಟ್ಟಿದ ಮಠಗಳು ಎಂದಾದರೂ ಬಿದ್ದು ಹೋಗಬಹುದು. ಆದರೆ ಭಕ್ತರ ಮನಸ್ಸಿನಲ್ಲಿ ಕಟ್ಟಿದ ಮಠಗಳು ಎಂದಿಗೂ ಶಾಶ್ವತವಾಗಿರುತ್ತವೆ ಎಂದರು.
ಮಹಂತ ಸ್ವಾಮೀಜಿ ಕಾರ್ಯಕ್ರಮದಲ್ಲಿ ಅಪಮಾನ:
ನಾಲ್ಕು ವರ್ಷದ ಹಿಂದೆ ಲಿಂಗೈಕ್ಯ ಡಾ.ಮಹಂತ ಸ್ವಾಮೀಜಿ ಕಾರ್ಯಕ್ರಮದಲ್ಲಿ ನನಗೆ ಅಪಮಾನವಾಗಿತ್ತು. ದಾವಣಗೆರೆ ನಗರದಲ್ಲಿರುವ ರೇಣುಕಾ ಮಂದಿರದಲ್ಲಿ ಇಂದು ನನಗೆ ಗೌರವ ಸಿಕ್ಕಿದೆ. ಇದಕ್ಕೆ ಹೇಳುವುದು ಅತ್ತೆಗೊಂದು ಕಾಲ, ಸೊಸೆಗೊಂದ ಕಾಲ ಎಂದು. ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯದಾಗುತ್ತದೆ. ನಾನು ಹಣ ಮಾಡಿಲ್ಲ. ಸಮಾಜದ ಕೆಲಸ ಮಾಡಿದ್ದೇನೆ ಎಂದರು.