ದಾವಣಗೆರೆ : ರಾಜ್ಯ ಸರ್ಕಾರ ಇನ್ನೇನು ಏಳೆಂಟು ತಿಂಗಳು ಅಧಿಕಾರದಲ್ಲಿದ್ದು, ಮತ್ತೆ ಚುನಾವಣೆಯನ್ನು ಎದುರಿಸಲಿದೆ. ಆದರೆ ಈಗ ಮೀಸಲಾತಿ ಹೋರಾಟಗಳು ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಕಂಟಕವಾಗಲಿದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಮತ್ತೆ ಒತ್ತಾಯಗಳು ಶುರುವಾಗಿವೆ. ಈಗಾಗಲೇ ಕನಕ ಗುರುಪೀಠದಲ್ಲಿ ಮೀಸಲಾತಿ ಹಕ್ಕೊತ್ತಾಯ ಸಭೆ ನಡೆಸುತ್ತಿದ್ದು, ಮತ್ತೆ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.
ಕುರುಬ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎನ್ನುವ ಹೋರಾಟಗಳು ಆಗಿದ್ದಾಯ್ತು, ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡಿ ಶಕ್ತಿ ಪ್ರದರ್ಶನ ಕೂಡ ಮಾಡಿದ್ದು ಆಯಿತು. ಈಗ ಮತ್ತೆ ಹಕ್ಕೊತ್ತಾಯ ಸಭೆಗಳು ಶುರುವಾಗಿವೆ. ಹರಿಹರ ತಾಲೂಕಿನ ಬಳಿ ಇರುವ ಬೆಳ್ಳೋಡಿ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಎಸ್ಟಿ ಮೀಸಲಾತಿಗಾಗಿ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಲು ಮೀಸಲಾತಿ ಹಕ್ಕೊತ್ತಾಯ ಸಭೆ ನಡೆಯುತ್ತಿದೆ.
ಬುಡಕಟ್ಟು ಸಂಶೋಧನಾ ಕೇಂದ್ರ ಅಧ್ಯಯನ ನಡೆಸಿ ವರದಿ ತಯಾರು ಮಾಡುತ್ತಿದೆ. ಈಗಾಗಲೇ 70% ರಷ್ಟು ಕೆಲಸ ಮುಗಿದಿದ್ದು, ರಾಜ್ಯ ಸರ್ಕಾರದ ಮುಂದೆ ವರದಿ ಬಂದ ನಂತರ ಕೇಂದ್ರಕ್ಕೆ ಕಳುಹಿಸುವ ಒತ್ತಾಯವನ್ನು ಮಾಡುತ್ತೇವೆ ಎಂದು ಶ್ರೀಗಳು ತಿಳಿಸಿದರು.