ದಾವಣಗೆರೆ: ಅಬಕಾರಿ ಸಚಿವ ಹೆಚ್. ನಾಗೇಶ್ ಹುಚ್ಚು ಹುಚ್ಚಾಗಿ ಹೇಳಿಕೆ ಕೊಡೋದನ್ನ ನಿಲ್ಲಿಸಿ, ಸಿಎಂ ಸಲಹೆ ಪಡೆದು ಪ್ರಬುದ್ಧ ರಾಜಕಾರಣ ಮಾಡಲಿ ಎಂದು ಹೊನ್ನಾಳಿ ಶಾಸಕ, ಮಾಜಿ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಮನೆಮನೆಗೆ, ಹಟ್ಟಿಗಳಿಗೆ, ತಾಂಡಗಳಿಗೆ ಮದ್ಯ ಸರಬರಾಜು ಮಾಡುವುದಾಗಿ ಹುಚ್ಚು ಹೇಳಿಕೆ ನೀಡಿದ್ದಾರೆ. ನಾನು ಅಬಕಾರಿ ಸಚಿವನಾಗಿದ್ದಾಗ ರಾಜ್ಯದ ಉದ್ದಗಲಕ್ಕೂ ಭೇಟಿ ನೀಡಿ ಕಳ್ಳಬಟ್ಟಿ, ನಕಲಿ ಮದ್ಯ ಹಾವಳಿ ತಡೆಗಟ್ಟಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ರಾಜಸ್ವ ತಂದುಕೊಟ್ಟಿದ್ದೆ. ನಾಗೇಶ್ ಹೇಳಿಕೆಯಿಂದ ಸರ್ಕಾರದ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ. ಹೀಗಾಗಿ ಸಚಿವರು ಆತುರದ ಹೇಳಿಕೆ ಕೊಡದೇ, ಸಿಎಂ ಯಡಿಯೂರಪ್ಪನವರ ಸಲಹೆ ಪಡೆದು, ಪ್ರಬುದ್ಧ ರಾಜಕಾರಣ ಮಾಡಲಿ ಎಂದು ಸಲಹೆ ನೀಡಿದರು.