ಕರ್ನಾಟಕ

karnataka

ETV Bharat / city

ಕೊರೊನಾ ಲಕ್ಷಣ ಇದ್ರೂ ಮಗನ ಮದುವೆ: ಚಕ್ರವ್ಯೂಹವಾದ ರಾಣೆಬೆನ್ನೂರು ಸೋಂಕಿತನ ಇತಿಹಾಸ!

ವಾರದ ಹಿಂದೆ ಮಗನ ಮದುವೆ ಮಾಡಿದ್ದ ರಾಣೆಬೆನ್ನೂರು ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾದ ಬೆನ್ನೆಲ್ಲೇ ಆತನ ಜೊತೆ ಸಂಪರ್ಕಕ್ಕೆ ಬಂದಿದ್ದ 99 ಜನರನ್ನು ಕ್ವಾರಂಟೈನ್​ ಮಾಡಲಾಗಿದೆ.

ranebennuru-corona-patient-travel-history
ಕೊರೊನಾ ಸೋಂಕಿತ ಪತ್ತೆ

By

Published : Jul 7, 2020, 10:46 PM IST

ರಾಣೆಬೆನ್ನೂರು: ಮಾರುತಿ ನಗರದ 55 ವರ್ಷದ ವ್ಯಕ್ತಿ ಕೊರೊನಾ ಪಾಸಿಟಿವ್ ಬಂದು ದಾವಣಗೆರೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇವರ ಜತೆ ಸಂಪರ್ಕ ಹೊಂದಿರುವ ಜನರಿಗೆ ಆತಂಕ ಮೂಡಿಸಿದೆ.

ಈ ವ್ಯಕ್ತಿ ವಾರದ ಹಿಂದೆ ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದ. ಅಲ್ಲದೆ ಜ್ವರ ಕಾಣಿಸಿಕೊಂಡ ನಂತರವೂ ಇತರ ಮದುವೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಜೂನ್ 29ರಂದು ಜ್ವರ ಬಂದಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮತ್ತೆ ಜು. 3ರಂದು ಮತ್ತೊಂದು ಬಾರಿ ಖಾಸಗಿ ಆಸ್ಪತ್ರೆಗೆ ಹೋದಾಗ, ವೈದ್ಯರು ಸರ್ಕಾರಿ ಆಸ್ಪತ್ರೆಗೆ ಹೋಗಿ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿಸುವಂತೆ ಹೇಳಿದ್ದರು.

ಆದರೆ ವ್ಯಕ್ತಿ ಆಸ್ಪತ್ರೆಗೆ ಹೋಗದೆ ಅದೇ ದಿನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿ ಅಕ್ಕಪಕ್ಕದ ಜನರಿಗೆ ಹಾಗೂ ಸಂಬಂಧಿಕರಿಗೆ ಊಟ ಹಾಕಿಸಿದ್ದಾನೆ. ಈ ಎಲ್ಲಾ ಕಾರ್ಯಕ್ರಮ ಮುಗಿದ ನಂತರ ಜು. 4 ರಂದು ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗೆ ತೆರಳಿ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕೊಟ್ಟು ಬಂದಿದ್ದಾನೆ.

ಆ ಬಳಿಕವೂ ವೈದ್ಯರು ಮನೆಯಲ್ಲಿ ಇರುವಂತೆ ಹೇಳಿದರೂ ತಾಲೂಕಿನ ಅಸುಂಡಿ ಗ್ರಾಮದ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾರೆ. ಜು. 6ರಂದು ಮತ್ತೆ ದಾವಣಗೆರೆ ಖಾಸಗಿ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದು, ಸಂಜೆ ವೇಳೆಗೆ ಆತನ ವರದಿ ಪಾಸಿಟಿವ್ ಬಂದಿದೆ.

ಜು. 7ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈತನ ಜತೆ ಪ್ರಥಮ, ದ್ವಿತೀಯ ಸಂಪರ್ಕದಲ್ಲಿದ್ದ 99 ಜನರನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಇವರ ಜತೆ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೆ ಈ ಪ್ರಕರಣ ದೊಡ್ಡ ತಲೆನೋವು ತಂದಿದೆ.

ABOUT THE AUTHOR

...view details