ದಾವಣಗೆರೆ:ಅದೊಂದು ಯೋಧರ ಗ್ರಾಮ. ಆ ಗ್ರಾಮದಲ್ಲಿ ಯಾರೂ ಕಂಡು ಕೇಳರಿಯದ ಕಿಲೋ ಮೀಟರ್ ಉದ್ದದ ಅವೈಜ್ಞಾನಿಕ ಫ್ಲೈಓವರ್ ನಿರ್ಮಾಣ ಮಾಡಲಾಗಿದ್ದು, ಆ ಫ್ಲೈ ಓವರ್ ಕೆಳಗೆ ಹಾದು ಹೋಗಿರುವ ರೈಲು ಮಾರ್ಗವನ್ನು ಮಕ್ಕಳು, ವೃದ್ಧರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಜನರು ಸಂಚರಿಸಲು ಪುಟ್ಟ ಮೇಲ್ಸೇತುವೆ ಅಥವಾ ಅಂಡರ್ಪಾಸ್ ನಿರ್ಮಾಣ ಮಾಡದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ ಆಗಿದೆ.
ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದಲ್ಲಿ ಮೂರು ಸಾವಿರ ಜನಸಂಖ್ಯೆಯಿದ್ದು, ಇಲ್ಲಿ ದಾವಣಗೆರೆಯಿಂದ ಸಂತೆಬೆನ್ನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಫ್ಲೈ ಓವರ್ ಕೂಡಾ ನಿರ್ಮಾಣ ಮಾಡಲಾಗಿದೆ. ದುರಂತವೆಂದರೆ ಈ ಫ್ಲೈಓವರ್ ಕೆಳಗೆ ಹಾದು ಹೋಗಿರುವ ರೈಲ್ವೆ ಹಳಿಗೊಂದು ಪುಟ್ಟ ಮೇಲ್ಸೇತುವೆ ಇಲ್ಲವೇ ಅಂಡರ್ ಪಾಸ್ ನಿರ್ಮಾಣ ಮಾಡದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ ಆಗಿದೆ.
ಇದಲ್ಲದೇ ಇಲ್ಲಿ ಸಾವಿರಾರು ಜನ ಪ್ರತಿನಿತ್ಯ ರೈಲ್ವೆ ಹಳಿದಾಟಿ ತಮ್ನ ತಮ್ಮ ಕೆಲಸಕ್ಕೆ ತೆರಳಬೇಕಾಗಿದ್ದು, ನೂತನವಾಗಿ ನಿರ್ಮಾಣವಾಗಿರುವ ಬ್ರಿಡ್ಜ್ನಿಂದ ಗ್ರಾಮಸ್ಥರ ಗೋಳು ಹೇಳತೀರದಾಗಿದ್ದು, ಶಾಲಾ ಮಕ್ಕಳು, ವೃದ್ದರಂತೂ ಜೀವ ಬಿಗಿಹಿಡಿದು ರೈಲ್ವೆ ಹಳಿಗಳನ್ನು ದಾಟುವ ಪರಿಸ್ಥಿತಿ ಎದುರಾಗಿದೆ. ಸಾರ್ವಜನಿಕರು ರೈಲ್ವೆ ಬಳಿಯ ಒಂದು ಬದಿಯಿಂದ ಇನ್ನೊಂದು ಬದಿ ದಾಟದಿದ್ದರೆ, ಸರಿಸುಮಾರು 1.4 ಕಿ.ಮೀ ಸುತ್ತಿಕೊಂಡು ಬರುವ ಪರಿಸ್ಥಿತಿ ಇದೆ.