ದಾವಣಗೆರೆ:ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ಬಳಿಕ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುವುದು ಪದ್ಧತಿ. ಆದರೆ ಲಾಡ್ಜ್ನಲ್ಲಿಟ್ಟು ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದರಿಂದಾಗಿ ಮೃತನ ಕುಟುಂಬಸ್ಥರು ಇದೊಂದು ಕಸ್ಟೋಡಿಯಲ್ ಡೆತ್ ಎಂದು ಆರೋಪ ಮಾಡಿದ್ದಾರೆ.
ದಾವಣಗೆರೆಯ ಸಿಇಎನ್ ಪೊಲೀಸರು ಶನಿವಾರ (ಡಿಸೆಂಬರ್ 4) ಚಿತ್ರದುರ್ಗ ಜಿಲ್ಲೆಯ ಭರಮಸಾಗರ ತಾಲೂಕಿನ ಬಹದ್ದೂರುಘಟ್ಟ ಗ್ರಾಮದ 35 ವರ್ಷದ ಕುಮಾರ್ ಎಂಬಾತನನ್ನು ಪ್ರಕರಣವೊಂದರ ವಿಚಾರಣೆ ಹಿನ್ನೆಲೆಯಲ್ಲಿ ತಮ್ಮ ಕಸ್ಟಡಿಗೆ ಪಡೆದಿದ್ದರು. ಕುಮಾರ್ನನ್ನು ಪೊಲೀಸ್ ಠಾಣೆಗೆ ಕರೆತರುವ ಬದಲು ಲಾಡ್ಜ್ನಲ್ಲಿಟ್ಟು ವಿಚಾರಣೆ ನಡೆಸಿದ್ದರು. ಮಂಗಳವಾರ ಬೆಳಗ್ಗೆ ವಿಚಾರಣಾಧೀನದಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ ಎಂಬುದು ಬಯಲಾಗಿದೆ. ಹೀಗಾಗಿ ಪೊಲೀಸರೇ ಚಿತ್ರಹಿಂಸೆ ನೀಡಿ, ಕೊಂದಿದ್ದಾರೆ ಎಂಬುದು ಸಂಬಂಧಿಗಳ ದೂರು.
'ಪೊಲೀಸರು ಕುಮಾರ್ನನ್ನು ವಶಕ್ಕೆ ಪಡೆದಿದ್ದು ಏಕೆ?'
ಬೀದರ್‌ನ ವಿಜಯ ಎಜುಕೇಷನ್ ಟ್ರಸ್ಟ್‌ಗೆ ಕೆಲವೊಂದು ಗುತ್ತಿಗೆ ಕೊಡಿಸಲು ಕುಮಾರ್ ಅವರು ಟ್ರಸ್ಟ್ನಿಂದ ಐದು ಲಕ್ಷ ರೂಪಾಯಿ ಪಡೆದಿದ್ದರು. ಅದರಲ್ಲಿ ನಾಲ್ಕು ಲಕ್ಷ ರೂಪಾಯಿಯನ್ನು ಅಧಿಕಾರಿಗಳಿಗೆ ಕೊಟ್ಟಿದ್ದರು. ಉಳಿದ ಒಂದು ಲಕ್ಷ ರೂಪಾಯಿ ಖರ್ಚಾಗಿತ್ತು. ದುರಂತವೆಂದರೆ, ಗುತ್ತಿಗೆ ತೆಗೆದುಕೊಂಡ ಟ್ರಸ್ಟ್ ಎರಡು ವರ್ಷವಾದ್ರೂ ಕೆಲಸ ಆರಂಭಿಸಿರಲಿಲ್ಲ. ಅನುದಾನ ವಾಪಸ್ಸಾಗಿತ್ತು.
ತಾವು ಕೊಟ್ಟ ಹಣವನ್ನು ವಾಪಸ್ ಕೇಳಿ ವಿಜಯ ಎಜುಕೇಷನ್ ಟ್ರಸ್ಟ್‌ನ ಪ್ರಮುಖರೊಬ್ಬರು ಪದೇ ಪದೇ ಹಿಂಸೆ ನೀಡುತ್ತಿದ್ದರು. ಅಲ್ಲದೇ ತಮಗೆ ಆಪ್ತರಾಗಿದ್ದ ಪೊಲೀಸ್ ಅಧಿಕಾರಿಯನ್ನು ಬಳಸಿಕೊಂಡು ಕುಮಾರ್‌ನಿಂದ ಹಣ ವಸೂಲಿ ಮಾಡುವ ಪ್ರಯತ್ನ ಮಾಡುತ್ತಿದ್ದರು. ಈ ವಿಚಾರವಾಗಿ ರಾಜಿ ಪಂಚಾಯತಿ ನಡೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪೊಲೀಸ್ ವಿಚಾರಣೆಗೆಂದು ಬಂದವನು ವಾಪಸು ಬಾರದ ಲೋಕಕ್ಕೆ ತೆರಳಿದ್ದಾನೆ. ಪೊಲೀಸರ ಹಿಂಸೆಯಿಂದಲೇ ಕುಮಾರ್ ಸಾವಿಗೀಡಾಗಿದ್ದಾನೆ ಎಂಬುದು ಮೃತನ ಸಂಬಂಧಿಕರ ಆರೋಪ.
ಸಿಐಡಿ ತನಿಖೆಗೆ ಪ್ರಕರಣ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಬರದಿದ್ದರೂ ಪೊಲೀಸರು ಸುಮೊಟೊ ಕೇಸ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತನ ಸಂಬಂಧಿಕರು ಕಸ್ಟೋಡಿಯನ್ ಡೆತ್ ಎಂದು ಆರೋಪಿಸಿದ್ದು, ಎಸ್ಪಿ ಸಿ.ಬಿ. ರಿಷ್ಯಂತ್ ತನಿಖೆಯನ್ನು ಸಿಐಡಿಗೆ ವಹಿಸಿದ್ದಾರೆ. ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನೇತೃತ್ವದ ತಂಡದಿಂದ ತನಿಖೆ ಆರಂಭಿಸಲಾಗಿದೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ದಾವಣಗೆರೆ ತಾಲೂಕಿನ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಸ್ಟೋಡಿಯನ್ ಡೆತ್ ಪ್ರಕರಣ ನಡೆದಿತ್ತು. ಆ ಪ್ರಕರಣದ ತನಿಖೆಯನ್ನೂ ಸಿಐಡಿಗೆ ಒಪ್ಪಿಸಲಾಗಿತ್ತು. ಅದಾದ ಒಂದೂಕಾಲು ವರ್ಷದ ನಂತರ, ಮತ್ತೊಂದು ಪೊಲೀಸ್ ಕಸ್ಟೋಡಿಯನ್ ಡೆತ್ ಮರುಕಳಿಸಿದೆ. ಇದರಲ್ಲಿ ಕುಮಾರ್ ಸಾವಿಗೆ ಅಸಲಿ ಕಾರಣವೇನು ಎಂಬುದು ಬಯಲಾಗಬೇಕಿದೆ ಎಂಬುದು ಕುಮಾರ್ ಸಂಬಂಧಿಕರ ಹಾಗೂ ವಿವಿಧ ಸಂಘಟನೆಗಳ ಆಗ್ರಹ.
ಇದನ್ನೂ ಓದಿ:ದಾವಣಗೆರೆಯಲ್ಲಿ ಮತ್ತೊಂದು ಲಾಕಪ್ ಡೆತ್ ಆರೋಪ.. ತನಿಖೆ ನಡೆಸಲಾಗುವುದು: ಎಸ್ಪಿ ರಿಷ್ಯಂತ್