ದಾವಣಗೆರೆ: ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಹವಣಿಸುತ್ತಾರೆ. ಅದರಂತೆ ಪರೀಕ್ಷಾರ್ಥಿಗಳಿಗೆ ನೆರವಾಗಲೆಂದು ಆವರಗೊಳ್ಳ ಗ್ರಾಮ ಪಂಚಾಯಿತಿ ಸುಸಜ್ಜಿತವಾದ ಗ್ರಂಥಾಲಯ ನಿರ್ಮಾಣ ಮಾಡಿದೆ.
ಗ್ರಾಮ ಪಂಚಾಯತಿ ಸದಸ್ಯರು, ಅಧಿಕಾರಿಗಳು ಹಾಗೂ ಗ್ರಾಮಸ್ಥರ ಶ್ರಮದಿಂದ ಗ್ರಂಥಾಲಯ ತಲೆಎತ್ತಿದೆ. ಸುತ್ತಲ ಗ್ರಾಮದ ವಿದ್ಯಾರ್ಥಿಗಳು ಗ್ರಂಥಾಲಯದ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಐಎಎಸ್, ಕೆಎಎಸ್ ಪರೀಕ್ಷೆಗೆ ಸಂಬಂಧಿಸಿದ ಅಧ್ಯಯನಕ್ಕೆ ಇಲ್ಲಿ ಸಾಕಷ್ಟು ಪುಸ್ತಕಗಳಿವೆ. ಕಂಪ್ಯೂಟರ್ನ ವ್ಯವಸ್ಥೆಯನ್ನೂ ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಪಿಡಿಓ ಮಂಜುನಾಥ್, 2015-16ರಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗ್ರಾಮ ವಿಕಾಸ್ ಯೋಜನೆಯಡಿ ಗ್ರಾಮದ ಅಭಿವೃದ್ಧಿಗಾಗಿ ನೀಡಿದ 3.20 ಲಕ್ಷ ರೂ ಅನುದಾನದಲ್ಲಿ ಗ್ರಂಥಾಲಯ ಸಿದ್ಧಪಡಿಸಲಾಗಿದೆ. ಕೊರೊನಾ ವೇಳೆ ಶಾಲೆಯಿಂದ ಹೊರ ಉಳಿದಿದ್ದ ಮಕ್ಕಳಿಗಾಗಿ ಈ ಗ್ರಂಥಾಲಯ ಮಾಡಲಾಗಿದ್ದು, ಇಲ್ಲಿ 3500 ಪುಸ್ತಕಗಳಿವೆ. ಕರ ವಸೂಲು ಮಾಡಿದ್ದ ಹಣದಲ್ಲಿ ಮೂರು ಕಂಪ್ಯೂಟರ್ ಖರೀದಿಸಲಾಗಿದೆ. ಅದರ ಉಪಯೋಗವನ್ನೂ ಮಕ್ಕಳು ಪಡೆಯುತ್ತಿದ್ದಾರೆ ಎಂದರು.
ಇಲ್ಲಿರುವ ಮೂರು ಕಂಪ್ಯೂಟರ್ಗಳಲ್ಲಿ ಇ ಲೈಬ್ರರಿಯನ್ನೂ ಅಳವಡಿಕೆ ಮಾಡಿದ್ದು, ಲಕ್ಷಾಂತರ ಪುಸ್ತಕಗಳು ಲಭ್ಯವಿವೆ. ಪಿಡಿಒ, ಬ್ಯಾಂಕ್, ಕಾನ್ಸ್‌ಸ್ಟೇಬಲ್, ಐಪಿಎಸ್, ಐಎಎಸ್, ಕೆಎಎಸ್ ಸೇರಿದಂತೆ ಭಾಷೆ, ಕಥೆ-ಕಾದಂಬರಿ, ವಿಜ್ಞಾನ-ತಂತ್ರಜ್ಞಾನ, ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಗ್ರಂಥಾಲಯದಲ್ಲಿವೆ.
ಇದನ್ನೂ ಓದಿ:ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಉಡುಪಿಯ ಅಕ್ಷಿತಾ ಹೆಗ್ಡೆ ಕನ್ನಡಿ ಬರಹ