ದಾವಣಗೆರೆ: ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಅಲೆಮಾರಿ ಕುಟುಂಬಗಳ ನೆರವಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಧಾವಿಸಿದ್ದಾರೆ.
ಸಂಕಷ್ಟದಲ್ಲಿದ್ದ ಅಲೆಮಾರಿ ಕುಟುಂಬಗಳಿಗೆ ರೇಣುಕಾಚಾರ್ಯ ಸಹಾಯಹಸ್ತ
ಹೊನ್ನಾಳಿ ಪಟ್ಟಣದ ದೇವನಾಯ್ಕನಹಳ್ಳಿ ಬಡಾವಣೆಯಲ್ಲಿ ಕಳೆದ 21 ವರ್ಷಗಳಿಂದ ಅಲೆಮಾರಿ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. 150ಕ್ಕೂ ಹೆಚ್ಚು ಜನರು ಶೆಡ್ನಲ್ಲೇ ವಾಸ ಮಾಡ್ತಿದ್ದಾರೆ. ವ್ಯಾಪಾರ ಇಲ್ಲದೇ ಕಂಗೆಟ್ಟಿದ್ದರು. ಬಲ್ಬ್, ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತಿದ್ದರು. ಆದ್ರೆ ಈಗ ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಹೊರಗಡೆ ಬರುವಂತಿಲ್ಲ. ಇದರಿಂದ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ರೇಣುಕಾಚಾರ್ಯ, ಅಲೆಮಾರಿ ಕುಟುಂಬಗಳನ್ನು ಭೇಟಿ ಮಾಡಿ ಕಷ್ಟ ಆಲಿಸಿದರು. ಅಲೆಮಾರಿ ಕುಟುಂಬಗಳಿಗೆ ಹಾಗೂ ಪುಟ್ಟ ಮಕ್ಕಳಿಗೆ ಊಟ ಬಡಿಸಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಧೈರ್ಯ ಹೇಳಿದರು. ಹೊನ್ನಾಳಿ ಪಟ್ಟಣದಲ್ಲಿ ನಿತ್ಯವೂ ಅನ್ನದಾಸೋಹಕ್ಕೆ ಏರ್ಪಾಡು ಮಾಡಲಾಗಿದ್ದು, ನಿತ್ಯವೂ ಕ್ವಿಂಟಾಲ್ಗಟ್ಟಲೆ ಅಕ್ಕಿ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರೈಸ್ ಮಿಲ್ನಿಂದ ತಂದ ಅಕ್ಕಿ ಚೀಲಗಳನ್ನು ಆಟೋದಿಂದ ಕಾರ್ಮಿಕರ ಜೊತೆ ಇಳಿಸಿದರು. ತಾವೇ ಹೆಗಲ ಮೇಲೆ ಹೊತ್ತು ಅಕ್ಕಿ ಚೀಲ ಹೊತ್ತೊಯ್ದು ಸಹಾಯ ಮಾಡಿದ್ದು ವಿಶೇಷವಾಗಿತ್ತು.
ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ ಆಶಾ ಕಾರ್ಯಕರ್ತೆಯರು, ದಾದಿಯರು, ಅಸಹಾಯಕ ಸ್ಥಿತಿಯಲ್ಲಿರುವವರು, ಪೊಲೀಸ್ ಸಿಬ್ಬಂದಿ, ಹೋಮ್ ಗಾರ್ಡ್, ಸಾರ್ವಜನಿಕರಿಂದ ಪ್ರತಿನಿತ್ಯ ಮೂರರಿಂದ ನಾಲ್ಕು ಸಾವಿರ ಜನರಿಗೆ ಊಟ ನೀಡುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ ಅಕ್ಕಿಯನ್ನು ಸಂಗ್ರಹಿಸಲಾಗುತ್ತಿದೆ.