ದಾವಣಗೆರೆ: ಕಾಂಗ್ರೆಸ್ ಗೆ ಈಗ ಕೆಟ್ಟ ಕಾಲ ಶುರುವಾಗಿದೆ. ಈ ಹಿಂದೆ ಮೇಕೆದಾಟು ಹೋರಾಟ ಆರಂಭಿಸಿ ಕೋವಿಡ್ ಹೆಚ್ಚಳ ಮಾಡಿದ್ರು. ಬಳಿಕ ಪಾದಯಾತ್ರೆ ಅರ್ಧಕ್ಕೆ ನಿಂತು ಹೋಯಿತು. ಈಗ ಉಕ್ರೇನ್ ನಲ್ಲಿ ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳ ಮಕ್ಕಳು ಅನುಭವಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನವರು ಬಿರಿಯಾನಿ ತಿನ್ನುತ್ತ, ಜೊತೆಗೆ ಡಾನ್ಸ್ ಮಾಡುತ್ತ ಪಾದಯಾತ್ರೆಯಲ್ಲಿ ತೊಡಗಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಮೇಕೆದಾಟು ವಿಚಾರ ಕೋರ್ಟನಲ್ಲಿದೆ. ಇದನ್ನು ಸೂಕ್ಷ್ಮವಾಗಿ ಬಗೆಹರಿಸಬೇಕು. ಕಾಂಗ್ರೆಸ್ ಪಾದಯಾತ್ರೆಯಿಂದ ತಮಿಳುನಾಡಿನ ಕೈಗೆ ಅಸ್ತ್ರ ಕೊಟ್ಟಂತಾಗುತ್ತದೆ. ಈ ಹಿಂದೆ ಎಸ್ ಎಂ ಕೃಷ್ಣ ಕಾವೇರಿ ವಿಚಾರದಲ್ಲಿ ಪಾದಯಾತ್ರೆ ಮಾಡಿ ಏನಾಗಿದೆ. ಕೋರ್ಟ್ ಛೀಮಾರಿ ಹಾಕಿ ಕಳುಹಿಸಿತ್ತು. ಮೇಕೆದಾಟು ಅಂದ್ರೆ ಕುಡಿಯುವ ನೀರು ಎಂದು. ಆದರೆ ಇವರು ನೀರಾವರಿಗೂ ಕೊಡುವುದಾಗಿ ಹೇಳುತ್ತಿದ್ದಾರೆ. ಇಷ್ಟಕ್ಕೂ ಇವರ ಮಾತನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇಳುತ್ತಿಲ್ಲ. ಯಾವ ಪುರುಷಾರ್ಥಕ್ಕೆ ಈ ಯಾತ್ರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಈ ಮೇಕೆದಾಟು ಪಾದಯಾತ್ರೆ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಮೀಡಿಯಾ ಜೊತೆಗೆ ಪ್ರಚಾರದಲ್ಲಿ ಈಗ ಡಿಕೆಶಿ ಮಾತ್ರ ಕಾಣುತ್ತಿದ್ದು, ಸಿದ್ದರಾಮಯ್ಯನವರು ಕಾಣೆಯಾಗಿದ್ದಾರೆ ಎಂದು ಆರ್ ಅಶೋಕ ವ್ಯಂಗ್ಯವಾಡಿದ್ದಾರೆ.