ದಾವಣಗೆರೆ : ಇಂದು ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್ ನಡುವೆ ಜಿಲ್ಲೆಯ ನಾಗೇನಹಳ್ಳಿ ಗ್ರಾಮವು ಹಿಂದೂ ಮುಸ್ಲಿಂ ಸೌಹಾರ್ದತೆಗೆ ಹಿಡಿದ ಕೈಗನ್ನಡಿಯಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಾಗೇನಹಳ್ಳಿಯಲ್ಲಿ ನೆಲೆಸಿರುವ ಜಮಾಲ್ ಷಾ ವಲಿ ಇಲ್ಲಿನ ಗ್ರಾಮಸ್ಥರಲ್ಲಿ ಸಾಮರಸ್ಯ ಮೂಡಿಸಿದ್ದಾನೆ.
ನಾಗೇನಹಳ್ಳಿ ಗ್ರಾಮದಲ್ಲಿ ಈ ಹಿಂದೆ ಜಮಾಲ್ ಎಂಬ ಮುಸ್ಲಿಂ ಸಂತರೊಬ್ಬರು ಸಮಾಧಿ ಆಗಿದ್ದು, ಆ ಸಮಾಧಿಯನ್ನು ಹಿಂದುಗಳು ಹಿಂದು ಸಂಪ್ರದಾಯದಂತೆ ಪೂಜೆ ಮಾಡಿಕೊಂಡು ಬಂದಿದ್ದಾರೆ. ಜೊತೆಗೆ ಈ ದರ್ಗಾದ ಬಳಿಯೇ ದೇವಾಲಯವನ್ನು ನಿರ್ಮಾಣ ಮಾಡಲಾಗಿದ್ದು,ಗುಡಿ, ಗೋಪುರ ಕಟ್ಟಿಸಿ ಜಮಾಲ್ ಸ್ವಾಮಿ ಪ್ರಸನ್ನ ಎಂಬ ಹೆಸರು ಇಡಲಾಗಿದೆ. ಜಿಲ್ಲೆಯ ನಾನಾ ಕಡೆಗಳಿಂದ ಜಮಾಲ್ ಸ್ವಾಮಿ ಸನ್ನಿಧಿಗೆ ಬರುವ ಭಕ್ತರು ಆರೋಗ್ಯ, ಕೌಟುಂಬಿಕ ಸಮಸ್ಯೆ, ವಿವಾಹ ಪ್ರಾಪ್ತಿ ಸೇರಿದಂತೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ಹರಕೆ ಹೊತ್ತುಕೊಳ್ಳುತ್ತಾರೆ. ಜಮಾಲ್ ಸ್ವಾಮಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ತಮ್ಮ ಇಷ್ಟಾರ್ಥಗಳು ಸಿದ್ದಿಸುತ್ತವೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.
ಜಮಾಲ್ ಷಾ ವಲಿಯವರ ಇತಿಹಾಸ: ಹಲವು ಶತಮಾನಗಳ ಹಿಂದೆ ಜಿಲ್ಲೆಯ ನಾಗೇನಹಳ್ಳಿ ಗ್ರಾಮಕ್ಕೆ ಜಮಾಲ್ ಷಾ ವಲಿ ಎಂಬ ಪವಾಡ ಪುರುಷರೊಬ್ಬರು ಕೇರಳದಿಂದ ಬಂದಿದ್ದರು. ಹಲವು ವರ್ಷಗಳ ಕಾಲ ಇಲ್ಲಿಯೇ ತಂಗಿದ್ದ ಅವರು ತಮ್ಮ ಪವಾಡಗಳಿಂದ ಜನರ ಮನಸ್ಸು ಗೆದ್ದಿದ್ದರು. ಅನಾರೋಗ್ಯ ಪೀಡಿತ ಜನರನ್ನು ತಮ್ಮ ಪವಾಡದಿಂದ ವಾಸಿ ಮಾಡುತ್ತಿದ್ದರು. ಇದಲ್ಲದೇ ಜಾನುವಾರುಗಳ ರೋಗ ರುಜಿನಗಳನ್ನು ತನ್ನ ಪವಾಡದಿಂದ ನಿವಾರಿಸಿದ್ದರು. ಹೀಗಾಗಿ ಹಿಂದಿನ ಜನರು ಜಮಾಲ್ ನನ್ನು ಸ್ವಾಮಿ ಎಂದು ಪೂಜಿಸುತ್ತಾ ಬಂದರು.