ಕರ್ನಾಟಕ

karnataka

ದೂಡಾದಿಂದ ಬರೋಬ್ಬರಿ 150 ಎಕರೆ ಜಮೀನು ಕಬಳಿಕೆ ಆರೋಪ : ರೈತರ ಆಕ್ರೋಶ

By

Published : Oct 31, 2021, 7:08 PM IST

ಒಂದು ವಾರದೊಳಗೆ ಭೂಸ್ವಾಧೀನ ಪ್ರಕಟಣೆ ವಾಪಸ್ ಪಡೆದು, ಒತ್ತಾಯ ಪೂರ್ವಕವಾಗಿ, ದೌರ್ಜನ್ಯದಿಂದ ಜಮೀನು ಖರೀದಿಸಲ್ಲ ಎಂದು ದೂಡಾ ಪ್ರಕಟಣೆ ಹೊರಡಿಸಬೇಕು‌. ಇಲ್ಲದಿದ್ದಲ್ಲಿ ದೂಡಾ ಕಚೇರಿಗೆ ಬೀಗ ಜಡಿದು ಅಮರಾಣಾಂತ ಸತ್ಯಾಗ್ರಹ, ಹೋರಾಟ ನಡೆಸಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ‌ ನೀಡಿದ್ದಾರೆ..

Davanagere
ದಾವಣಗೆರೆ

ದಾವಣಗೆರೆ :ನಗರದಲ್ಲಿ ರೈತರಿಗೆ ಮಾಹಿತಿ ನೀಡದೆ ಬರೋಬ್ಬರಿ 150 ಎಕರೆ ಜಮೀನನ್ನ ಕಬಳಿಕೆ ಮಾಡಿ ಲೇಔಟ್ ಮಾಡಲು ದಾವಣಗೆರೆ-ಹರಿಹರ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ದೂಡಾದಿಂದ ಬರೋಬ್ಬರಿ 150 ಎಕರೆ ಜಮೀನು ಕಬಳಿಕೆ ಆರೋಪ : ರೈತರ ಆಕ್ರೋಶ

ಸ್ವಚ್ಛಂದವಾಗಿ ಬೆಳೆದು ನಿಂತ ಭತ್ತದ ಗದ್ದೆ ಖರೀದಿಗೆ ನೀಡುವಂತೆ ದೂಡಾ ಅಧಿಕಾರಿಗಳು ಬೆನ್ನು ಬಿದ್ದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದಾವಣಗೆರೆ ನಗರದ ಹಳೆ ಕುಂದುವಾಡದಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಸುಮಾರು 53 ಎಕರೆಯಷ್ಟು ವಸತಿ ಯೋಜನೆ ಅಭಿವೃದ್ಧಿಪಡಿಸಲು ಮುಂದಾಗಿದೆ.

53 ಎಕರೆ ಜಮೀನಿನಲ್ಲಿ ಲೇಔಟ್ ಮಾಡಿದರೆ ಯಾವೊಬ್ಬ ರೈತ ತಕರಾರು ಮಾಡುತ್ತಿರಲಿಲ್ಲ. ಆದರೆ, ನಿವೇಶನ ಬೇಕೆಂದು ಸುಮಾರು 22 ಸಾವಿರ ಅರ್ಜಿಗಳು ಬಂದಿರುವ ಬೆನ್ನಲ್ಲೇ 53 ಎಕರೆ ಜಮೀನು ಸೇರಿದಂತೆ ಅಕ್ಕಪಕ್ಕದ ಸುಮಾರು 150 ಎಕರೆ ಜಮೀನನ್ನು ಭೂಸ್ವಾಧೀನ ಮಾಡುವುದಾಗಿ ದೂಡಾ ಪ್ರಕಟಣೆ ಹೊರಡಿಸಿದೆ. ಈ ಪ್ರಕಟಣೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕೇವಲ 53 ಎಕರೆ ಜಮೀನಿನಲ್ಲಿ ಮಾತ್ರ ಬಡಾವಣೆ ನಿರ್ಮಿಸುವುದಾಗಿ ಹೇಳಿ, ಈಗ ರೈತರ ಒಪ್ಪಿಗೆ ಪಡೆಯದೆ ಹಾಗೂ ಮಾಹಿತಿಯನ್ನೂ ನೀಡದೆ ಏಕಾಏಕಿ ಸುಮಾರು 150 ಎಕರೆ ಜಮೀನು ಭೂಸ್ವಾಧೀನ ಮಾಡುತ್ತೇವೆ ಎಂದು ರೈತರನ್ನು ಒಕ್ಕಲೆಬ್ಬಿಸುವ ಕುತಂತ್ರ ನಡೆದಿದೆ.

22 ಸಾವಿರ ನಿವೇಶನ ಬೇಡಿಕೆ ಅರ್ಜಿ ಬಂದಿದ್ದು, 150 ಎಕರೆ ಜಮೀನು ಸ್ವಾಧೀನ ಮಾಡಲು ಇದು ದೂಡಾ ಆಸ್ತಿಯಲ್ಲ. ಇನ್ನೊಂದು ಬಾರಿ ಅರ್ಜಿ ಕರೆದರೆ 30 ಸಾವಿರ ಅರ್ಜಿ ಬೀಳಬಹುದು. ಆಗ ಇಡೀ ಕುಂದುವಾಡವನ್ನೇ ಸ್ವಾಧೀನ ಮಾಡಿಕೊಳ್ಳಬಹುದು ಎಂದು ದೂಡಾ ಅಧಿಕಾರಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಇದಲ್ಲದೆ ಈ ಹಿಂದೆ ಕುಂದುವಾಡದಲ್ಲೇ ಕರ್ನಾಟಕ ಹೌಸಿಂಗ್ ಬೋರ್ಡ್​ನಿಂದ ಈಗಾಗಲೇ ಸುಮಾರು 300 ಎಕರೆಯಷ್ಟು ತುಂಗಭದ್ರಾ ಬಡಾವಣೆ ನಿರ್ಮಾಣ ಆಗಿದೆ. ಈ ಸ್ಥಳದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈಗ ಅಲ್ಪಸ್ವಲ್ಪ ಉಳಿದ ಜಮೀನುಗಳನ್ನು ವಶಪಡಿಸಿಕೊಂಡು ಬಡಾವಣೆ ನಿರ್ಮಿಸಿ ರೈತರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ ಎಂದು ಡಿಸಿ, ಎಸಿಯವರಿಗೆ ರೈತರು ಮನವಿ ಸಲ್ಲಿಸಿದ್ದಾರೆ.

ಒಂದು ವಾರದೊಳಗೆ ಭೂಸ್ವಾಧೀನ ಪ್ರಕಟಣೆ ವಾಪಸ್ ಪಡೆದು, ಒತ್ತಾಯ ಪೂರ್ವಕವಾಗಿ, ದೌರ್ಜನ್ಯದಿಂದ ಜಮೀನು ಖರೀದಿಸಲ್ಲ ಎಂದು ದೂಡಾ ಪ್ರಕಟಣೆ ಹೊರಡಿಸಬೇಕು‌. ಇಲ್ಲದಿದ್ದಲ್ಲಿ ದೂಡಾ ಕಚೇರಿಗೆ ಬೀಗ ಜಡಿದು ಅಮರಾಣಾಂತ ಸತ್ಯಾಗ್ರಹ, ಹೋರಾಟ ನಡೆಸಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ‌ ನೀಡಿದ್ದಾರೆ.

ABOUT THE AUTHOR

...view details