ದಾವಣಗೆರೆ: ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕೊರೊನಾ ಸೋಂಕಿತರು ಹಾಸ್ಟೆಲ್ನಿಂದ ಹೊರಗಡೆ ಬಂದು ಪ್ರತಿಭಟನೆ ನಡೆಸಿದ ಘಟನೆ ನಗರದ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ನಡೆದಿದೆ.
ಸುಮಾರು 25ಕ್ಕೂ ಹೆಚ್ಚು ಕೊರೊನಾ ಸೋಂಕಿತರನ್ನು ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದ್ರೆ ಯಾವುದೇ ಸೌಲಭ್ಯ ಕಲ್ಪಿಸದ ಜಿಲ್ಲಾಡಳಿತದ ಕ್ರಮ ಖಂಡಿಸಿ ಹೊರಗಡೆ ಬಂದಿದ್ದಾರೆ. ಈ ವೇಳೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
"ಕಳೆದ ನಾಲ್ಕೈದು ದಿನಗಳಿಂದ ಸರಿಯಾಗಿ ಊಟ ಕೊಡುತ್ತಿಲ್ಲ. ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಸರಿಯಾಗಿ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಬೆಳಗ್ಗಿನ ಉಪಹಾರ ಮಧ್ಯಾಹ್ನ ಕೊಡುತ್ತಾರೆ. ರಾತ್ರಿ ಟೈಂ ಇಲ್ಲ. ಮಧ್ಯಾಹ್ನ ಊಟದ್ದು ಗ್ಯಾರಂಟಿಯೇ ಇಲ್ಲ. ಹೀಗಾದರೆ ನಾವೇನು ಮಾಡಬೇಕು. ಚಿಕಿತ್ಸೆ ನೀಡುವ ನೆಪದಲ್ಲಿ ನಮ್ಮನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ತುಂಬಾ ಬೇಸರ ತಂದಿದೆ" ಎಂದು ಸೋಂಕಿತರು ಅಳಲು ತೋಡಿಕೊಂಡಿದ್ದಾರೆ.
ಹಾಸ್ಟೆಲ್ನಿಂದ ಹೊರಬಂದ ಕೊರೊನಾ ಸೋಂಕಿತರು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿದ್ಯಾನಗರ ಪೊಲೀಸರು ದೌಡಾಯಿಸಿದ್ದಾರೆ. ಈ ವೇಳೆ ಕೊರೊನಾ ಸೋಂಕಿತರು ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಎಲ್ಲರೂ ಒಳ ಹೋಗುವಂತೆ ಸೂಚಿಸಿದರೂ ನಮಗೆ ಸರಿಯಾದ ವ್ಯವಸ್ಥೆ ಕಲ್ಪಿಸುವವರೆಗೆ ಒಳ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಂತೂ ಕೊನೆಗೆ ಪೊಲೀಸರು ಮನವೊಲಿಸಿ ಹಾಸ್ಟೆಲ್ ಒಳಗೆ ಹೋಗುವಂತೆ ಮಾಡಿದ್ದಾರೆ. ಒಂದು ವೇಳೆ ಸೋಂಕಿತರು ಹೊರಗೆ ಬಂದರೆ ಸೋಂಕು ಹರಡುವ ಸಾಧ್ಯತೆ ಇದೆ. ಜಿಲ್ಲಾಡಳಿತ ಈಗಲಾದರೂ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.