ದಾವಣಗೆರೆ: ಕಾಶಿಯ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪಗಳನ್ನು ನಿರ್ಮಿಸುವ 30 ಕೋಟಿ ರೂ. ವೆಚ್ಚದ ಯೋಜನೆಗೆ ಸರ್ಕಾರ ಈಗಾಗಲೇ ನಿರ್ಧರಿಸಿದ್ದು, ಹರಿಹರದ ತುಂಗಾಭದ್ರಾ ನದಿ ತೀರದಲ್ಲಿ 108 ಮಂಟಪಗಳ ನಿರ್ಮಾಣ ಮಾಡಲು ನೀಲನಕ್ಷೆ ತಯಾರಿಸಲಾಗಿದೆ. ಇದರ ಶಂಕು ಸ್ಥಾಪನೆ ಇಂದು ನಡೆಯಲಿದೆ.
ಉತ್ತರ ಪ್ರದೇಶದಲ್ಲಿ ನಡೆಯುವ ಗಂಗಾ ಆರತಿ ಕಾರ್ಯಕ್ರಮ ಇಡೀ ದೇಶದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿದೆ. ಅದೇ ರೀತಿ ದಕ್ಷಿಣ ಭಾರತದಲ್ಲೂ ಈ ರೀತಿಯ ಕಾರ್ಯಕ್ರಮ ಮಾಡಲು ದಾವಣಗೆರೆ ಜಿಲ್ಲೆಯ ಹರಿಹರದ ತುಂಗಭದ್ರಾ ನದಿ ತಟದಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ತುಂಗಭದ್ರಾ ನದಿ ತೀರದಲ್ಲಿ ತುಂಗಾಭದ್ರಾ ಆರತಿಗೆ 108 ಮಂಟಪಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
30 ಕೋಟಿ ರೂ. ವೆಚ್ಚದ ಈ ಕಾಮಗಾರಿ ಪೂರ್ಣಗೊಂಡರೆ ಹರಿಹರದ ಗತವೈಭವವನ್ನು ಮರಳಿ ಪಡೆಯುವ ಹಾಗೂ ದೇಶದಲ್ಲೇ ಹಿಂದುಗಳ ಪ್ರಮುಖ ಯಾತ್ರಾ ಸ್ಥಳವನ್ನಾಗಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಸರ್ಕಾರ ಈಗಾಗಲೇ 10 ಕೋಟಿ ಹಣವನ್ನ ಬಿಡುಗಡೆ ಮಾಡಿದ್ದು, ಈ ಯೋಜನೆ ಸಿದ್ಧವಾಗಲು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಪ್ರಮುಖ ಪಾತ್ರವಹಿಸಿದ್ದಾರೆ.
ಉತ್ತರಕ್ಕೆ ಗಂಗಾರತಿಯಂತೆ ದಕ್ಷಿಣ ಭಾರತಕ್ಕೆ ತುಂಗಾ ನದಿ ಪವಿತ್ರ ಎನಿಸಿದೆ. ಈಗಾಗಲೇ ಈ ಯೋಜನೆಯ ಒಂದು ಭಾಗವಾದ 108 ತುಂಗಾಭದ್ರಾ ಆರತಿ ಮಂಟಪಗಳ ಶಿಲಾನ್ಯಾಸ ಕಾರ್ಯಕ್ರಮದ ಮಾಹಿತಿ ಹಾಗೂ ವಿಡಿಯೋವನ್ನು ಬಿಡುಗಡೆಗೊಳಿಸಲಾಗಿದೆ. ಉತ್ತರ ಪ್ರದೇಶ ಗಂಗಾ ನದಿ ತಟದಲ್ಲಿರುವ ರೀತಿಯಲ್ಲೇ ಈ ಯೋಜನೆ ರೂಪಗೊಳಿಸಲಾಗಿದೆ. ಹರಿಹರದ ರಾಘವೇಂದ್ರ ಮಠದ ಹಿಂಭಾಗ ಈ ಯೋಜನೆಗೆ ಸ್ಥಳ ನಿಗದಿ ಮಾಡಲಾಗಿದೆ.