ಬೆಂಗಳೂರು: ದೆಹಲಿಯಲ್ಲಿ ರಾಕೇಶ್ ಟಿಕಾಯತ್ ಕರ್ನಾಟಕದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ರೈತ ಹೋರಾಟಗಾರರಲ್ಲ, ಡೀಲ್ ಹೋರಾಟಗಾರರು! ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳಿಂದ ಹಣ ಪಡೆದು ಅಸಲಿ ರೈತರ ಹೋರಾಟವನ್ನು ಬಿಜೆಪಿ ಸರ್ಕಾರದ ವಿರುದ್ಧ ತಿರುಗಿಸಿದ ಡೀಲ್ ಹೋರಾಟಗಾರರಿವರು ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಆತ ಮೊದಲು ರೈತ ನಾಯಕ ಎನಿಸಿಕೊಂಡಿದ್ದ. ನಂತರ ಸರ್ಕಾರಿ ನೌಕರರ ಪರವಾಗಿ ಬೀದಿಗೆ ಇಳಿದಿದ್ದ. ಆಗಲೇ, ಇದು ಹೋರಾಟವಲ್ಲ, ಹಣ ಮಾಡುವ ದಂಧೆ ಎಂದು ರಾಜ್ಯದ ಜನತೆ ಅಭಿಪ್ರಾಯ ಪಟ್ಟಿದ್ದರು. ಜನರ ಅಭಿಪ್ರಾಯ ಸುಳ್ಳಾಗಲಿಲ್ಲ, ಸಾರಿಗೆ ನೌಕರರ ಹೋರಾಟವನ್ನು ಇವರು ಹೈಜಾಕ್ ಮಾಡಿಕೊಂಡಿದ್ದರು. ಮುಂದಿನದು ಬರೀ ಡೀಲ್ ಡೀಲ್ ಡೀಲರ್!!! ಎಂದು ರೈತ ನಾಯಕ ಕೋಡಿಹಳ್ಳಿಚಂದ್ರಶೇಖರ್ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
35 ಕೋಟಿ ಡೀಲ್: ಹಸಿರು ಶಾಲು ಹೊದ್ದುಕೊಂಡು ರೈತ ನಾಯಕನಂತೆ ಬಿಂಬಿಸುವ, ಅನ್ನದಾತನ ನೆರವಿಗೆ ಬಂದಂತೆ ನಟಿಸುವ ಡೀಲರ್ ಚಂದ್ರ ನಿಧಾನವಾಗಿ ಕಾರ್ಮಿಕ ಹೋರಾಟಗಾರನಾಗಿ ಬದಲಾದ. ಈ ಹಠಾತ್ ಬದಲಾವಣೆ ಹಿಂದೆ ಡೀಲ್ ಕಾರುಬಾರು ಇದೆ! ಬರೋಬ್ಬರಿ 35 ಕೋಟಿ ಹಣದ ಆಮಿಷಕ್ಕೆ ಸಾರಿಗೆ ನೌಕರರ ಹೋರಾಟಕ್ಕೆ ತಿಲಾಂಜಲಿ ಇಡಲು ಇದೇ ಡೀಲ್ ಶೇಖರ್ ಒಪ್ಪಿದ್ದ. ಪ್ರಧಾನಿ ಮೋದಿ ಸರ್ಕಾರ ರೈತಪರ ಕಾಯ್ದೆಗಳನ್ನು ಜಾರಿಗೊಳಿಸಿದಾಗ ರೈತರ ಹೆಸರಿನಲ್ಲಿ ನಡೆಸಿದ ಈ ಡೀಲ್ ಚಂದ್ರಶೇಖರ್, ಮೋದಿ ಹಾಗೂ ಬಿಜೆಪಿ ವಿರೋಧಿಗಳಿಂದ ಎಷ್ಟು ಕೋಟಿ ಡೀಲ್ ಪಡೆದಿರಬಹುದು?.
35 ಕೋಟಿಗೆ ಸಾರಿಗೆ ಮುಷ್ಕರವನ್ನು ಡೀಲ್ ಮಾಡಿದ ಕೋಡಿಹಳ್ಳಿ ಈಗ ಆಪ್ ನಾಯಕ! ಭ್ರಷ್ಟ ಚಂದ್ರಶೇಖರ ಈಗ ಆಪ್‌ನಲ್ಲಿದ್ದಾರೆ. ಡೀಲ್ ಮೊತ್ತದಲ್ಲಿ ಕೇಜ್ರಿವಾಲ್‌ಗೆ ಎಷ್ಟು ತಲುಪಿರಬಹುದು? ಎಂದು ಪ್ರಶ್ನಿಸಿದೆ.
ಬೆಳಗಾವಿ ಲಕ್ಷ್ಮಿಗೆ ಸಾಲ ಕೊಡಿಸಿದ್ದು ಯಾರು?:ಕೆಪಿಸಿಸಿಯ ಬೇನಾಮಿ ಅಧ್ಯಕ್ಷೆಯ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಡಿ.ಕೆ. ಶಿವಕುಮಾರ್ ಅವರು ಸಚಿವರಾಗಿದ್ದ ಅವಧಿಯಲ್ಲಿ ನಡೆಸಿದ ಅವ್ಯವಹಾರಗಳ ಬಗ್ಗೆ ಬೆಳಕು ಚೆಲ್ಲಬೇಕೇ? ಬೆಳಗಾವಿಯ ಲಕ್ಷ್ಮಿಗೆ ಮಂಗಳೂರು, ಉತ್ತರ ಕನ್ನಡ ಹಾಗೂ ಇನ್ನಿತರ ಜಿಲ್ಲಾ ಸಹಕಾರ ಬ್ಯಾಂಕ್‌ಗಳಿಂದ ನೂರಾರು ಕೋಟಿ ಸಾಲ ಕೊಡಿಸಿದ್ದು ಯಾರು? ಡಿಕೆಶಿ ಅವರೇ, ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಿಂದ ದುಡ್ಡು ಹೊಡೆಯುವ ಜಾಲ ಬೆಳೆಸಿದ್ದು ಹಾಗೂ ಪರ್ಸಂಟೇಜ್ ವ್ಯವಹಾರ ಶುರು ಮಾಡಿದ್ದು ನೀವೇ ಎಂಬ ರಹಸ್ಯ ಕೆಪಿಸಿಸಿ ಕಚೇರಿಯಿಂದಲೇ ಹೊರ ಬಂದಿತ್ತು. ಇಷ್ಟೆಲ್ಲ ಇರುವಾಗ ನೀವು ಸತ್ಯವ್ರತನ ಸೋಗು ಹಾಕಿದರೆ ರಾಜ್ಯದ ಜನ ನಂಬುತ್ತಾರೆಯೇ? ಎಂದು ವಾಗ್ದಾಳಿ ನಡೆಸಿದೆ.
ಐಟಿ, ಇಡಿ, ಸಿಬಿಐ ದಾಳಿ ಮಾಡಿದಾಗಲೆಲ್ಲ ಬಿಜೆಪಿ ಮೇಲೆ ಬೊಟ್ಟುಮಾಡುವ ಡಿ.ಕೆ. ಶಿವಕುಮಾರ್ ಅವರೇ, ಕೆಪಿಸಿಸಿ ಕಚೇರಿಯಲ್ಲೇ ಕಳಿತು ನಿಮ್ಮದೇ ಪಕ್ಷದ ಉಗ್ರಪ್ಪ ಹಾಗೂ ಸಲೀಮ್ ಅವರು ಪಿಸುಮಾತುಗಳನ್ನಾಡಿದ್ದು ಮರೆತಿರಾ? ನ್ಯಾಯಯುತ ಸಂಪಾದನೆ ಮಾಡಿದ್ದರೆ ನಿಮ್ಮ ಮೇಲೆ ಸ್ವಪಕ್ಷೀಯ ನಾಯಕರಿಂದ ಅಪವಾದ ಕೇಳಿ ಬರುತ್ತಿತ್ತೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಕೆಪಿಸಿಸಿ ಅಧ್ಯಕ್ಷರು ಮತ್ತು ಅವರ ಹಿರಿಮೆ!: 317 ಬ್ಯಾಂಕ್ ಖಾತೆಗಳು, 200 ಕೋಟಿ ಅಕ್ರಮ ವರ್ಗಾವಣೆ, 800 ಕೋಟಿ ಬೇನಾಮಿ ಆಸ್ತಿ, ಇಂತಹ ವ್ಯಕ್ತಿ ತಾಳೆ ಮರದಡಿಯಲ್ಲಿ ಹಾಲು ಕುಡಿಯಲು ಸಾಧ್ಯವೇ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಇವರೆಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಪಕ್ಷವೇ ಒಂದು ರೀತಿ, ಜಾಮೀನಿನ ಮೇಲೆ ಹೊರಗಿದೆ. ಭ್ರಷ್ಟಾಧ್ಯಕ್ಷರೇ, ಇಷ್ಟೆಲ್ಲ ಆದರೂ ಯಾವ ನೈತಿಕತೆಯಿಂದ ಬಿಜೆಪಿ ಮೇಲೆ ಆರೋಪಿಸುತ್ತೀರಿ? ಎಂದು ಪ್ರಶ್ನಿಸಿದೆ.
ಇದನ್ನೂ ಓದಿ:ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ನಾನು ತಟಸ್ಥ: ಸುಮಲತಾ ಅಂಬರೀಶ್