ಬೆಂಗಳೂರು: ಕಳೆದೆರಡು ದಿನದಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ 'PayCM' ವಿಚಾರವಾಗಿ ಜಟಾಪಟಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿನ ಹಗರಣದ ಆರೋಪಗಳ ಕುರಿತ ‘ಸ್ಕ್ಯಾಮ್ ರಾಮಯ್ಯ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡುವ ಮೂಲಕ ಠಕ್ಕರ್ ನೀಡಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ಅಧಿಕಾರಾವಧಿಯ ಶೇ. 100 ಭ್ರಷ್ಟಾಚಾರವನ್ನು ಅನಾವರಣಗೊಳಿಸುವ ‘ಸ್ಕ್ಯಾಮ್ ರಾಮಯ್ಯ’ ಪುಸ್ತಕವನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಕಟೀಲ್, 'ಪೇ ಸಿಎಂ' ಎನ್ನುವುದು ಕಾಂಗ್ರೆಸ್ ಮೇಡಂಗೆ ಮಾಡುವ ಪೇಮೆಂಟ್ ಬಗ್ಗೆ ಉಲ್ಲೇಖ ಇದಾಗಿದೆ. ಶಿವಕುಮಾರ್ ಚೀಟಿ ನುಂಗಿದ್ದನ್ನು ನೋಡಿದ್ದೀರಿ. ಅವರು ಚೀಟಿ ಶಿವಕುಮಾರ್ ಆಗಿದ್ದಾರೆಂದು ಟಾಂಗ್ ನೀಡಿದರು.
ಸಿದ್ದರಾಮಯ್ಯ ಅವರು ಕೋರ್ಟಿನ ಆದೇಶದನ್ವಯ ಬಂಧನಕ್ಕೊಳಗಾಗಲಿದ್ದಾರೆ ಎಂದ ಅವರು, ದೇಶದ ಬಹು ಹಳೆಯದಾದ ಕಾಂಗ್ರೆಸ್ ಪಕ್ಷವು ಸುದೀರ್ಘ ಅವಧಿಯ ರಾಜಕಾರಣದಲ್ಲಿ ಭ್ರಷ್ಟಾಚಾರಕ್ಕೆ ಅತಿ ದೊಡ್ಡ ಕೊಡುಗೆ ಕೊಟ್ಟಿದೆ. ದೇಶದಲ್ಲಿ ಉಗ್ರವಾದ ಭಯೋತ್ಪಾದನೆಗೂ ಕಾಂಗ್ರೆಸ್ ಪಕ್ಷವೇ ಕಾರಣ. 1947ರಿಂದ 2014ವರೆಗೆ ಗರಿಷ್ಠ ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರಕ್ಕೆ ಬೃಹತ್ತಾದ ಕೊಡುಗೆ ನೀಡಿದೆ ಎಂದರು.
ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕರು, ರಾಜ್ಯದ ನಾಯಕರು ಹಗರಣಗಳಲ್ಲಿ ಸಿಲುಕಿದ್ದಾರೆ. ತನಿಖೆಯ ಫಲಿತಾಂಶಗಳು ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಈಡುಮಾಡಿವೆ. ಜನರ ದಾರಿ ತಪ್ಪಿಸಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ. ಸಿದ್ದರಾಮಣ್ಣನ ಕಾಲಘಟ್ಟದಲ್ಲೂ ಅತಿಹೆಚ್ಚು ಹಗರಣಗಳು ನಡೆದಿದ್ದು, ಲೋಕಾಯುಕ್ತ ಶಕ್ತಿ ಕುಂದಿಸಿ ಹಗರಣಗಳನ್ನು ಮುಚ್ಚಿ ಹಾಕಲು ಆಗಿನ ಸರ್ಕಾರ ಮುಂದಾಗಿತ್ತು ಎಂದು ತಿಳಿಸಿದರು.
ಕಾಂಗ್ರೆಸ್‍ನ ಸಾಲು ಸಾಲು ಹಗರಣಗಳು: ನೆಹರೂರಿಂದ ಆರಂಭಿಸಿ ಮನಮೋಹನ್ ಸಿಂಗ್ ಕಾಲಘಟ್ಟದವರೆಗೆ ಈ ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಇತರ ಎಲ್ಲ ಪ್ರಧಾನಮಂತ್ರಿಗಳು ಭ್ರಷ್ಟಾಚಾರ ಮತ್ತು ವಿವಿಧ ಹಗರಣಗಳಲ್ಲಿ ಸಿಲುಕಿದವರೇ ಆಗಿದ್ದಾರೆ. 1948ರ ಜೀಪ್ ಹಗರಣದಿಂದ ಬೊಫೋರ್ಸ್, ಸಿಮೆಂಟ್ ಹಗರಣ, ಕಾಮನ್‍ವೆಲ್ತ್ ಹಗರಣದಿಂದ 2ಜಿ ಹಗರಣದವರೆಗೆ ಆಕಾಶ, ನೀರು, ಮಣ್ಣು ಮತ್ತು ಗಾಳಿಯಲ್ಲಿ ಗರಿಷ್ಠ ಹಗರಣಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಟೀಕಿಸಿದರು.
ಅನ್ವರ್ ಮಾಣಿಪ್ಪಾಡಿ ವರದಿ ₹2.5 ಲಕ್ಷ ಕೋಟಿ ಹಗರಣವನ್ನು ಬೆಳಕಿಗೆ ತರಲಿದೆ. ಅರ್ಕಾವತಿ, ಮೊಟ್ಟೆ, ಹಾಸಿಗೆ, ದಿಂಬು ಸೇರಿ ಅನೇಕ ಹಗರಣಗಳು ನಡೆದಿದ್ದವು. ಇವೆಲ್ಲವುಗಳನ್ನು ಮುಚ್ಚಿಡಲು ಕಾಂಗ್ರೆಸ್ ಪ್ರಯತ್ನಿಸಿತು. ಡ್ರಗ್ ದಂಧೆ, ಮರಳು ಮಾಫಿಯಾಗಳು ರಾಜ್ಯದ ಕಾಂಗ್ರೆಸ್ ಸರಕಾರವನ್ನು ನಡೆಸುತ್ತಿದ್ದವು. ಆ ದಂಧೆಗಳನ್ನು ನಮ್ಮ ಸರಕಾರ ನಿಯಂತ್ರಿಸಿದೆ ಎಂದು ವಿವರಿಸಿದರು.